ದೊಡ್ಡಬಳ್ಳಾಪುರ, (ಡಿ.28): ನಮ್ಮ ಹಾಗೂ ಇತರರ ಸುರಕ್ಷತೆಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದ ಅಗತ್ಯವಿದ್ದು, ಮುನ್ನೆಚ್ಚರಿಕೆ ವಹಿಸಿದರೆ ಬಹಳಷ್ಟು ಅಪಘಾತಗಳನ್ನು ಹಾಗೂ ಜೀವ ಹಾನಿಯನ್ನು ತಡೆಗಟ್ಟಬಹುದು ಎಂದು ಸುಜ್ಞಾನ ದೀಪಿಕಾ ಜಾಗೃತಿ ಕಾರ್ಯಕ್ರಮದ ಸಂಚಾಲಕ ಎಂ.ಎಸ್.ಮಂಜುನಾಥ್ ತಿಳಿಸಿದರು.
ನಗರದ ಮಹಾವೀರ್ ಜೈನ್ ವಿದ್ಯಾಲಯದಲ್ಲಿ ನಡೆದ ರಸ್ತೆ ಸುರಕ್ಷತೆ ಹಾಗೂ ಆರೋಗ್ಯ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವುದು ಕಾನೂನು ರೀತಿ ಅಪರಾಧವಾಗಿದ್ದು, ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದರೆ ಪೋಷಕರು, ಶಿಕ್ಷೆಗೆ ಒಳಪಡೇಕಾಗುತ್ತದೆ. ಹೆಲ್ಮೆಟ್ ಧರಿಸದಿದ್ದರೆ ಅಪಘಾತ ಅದಾಗ ತಲೆಗೆ ಪೆಟ್ಟು ಬಿದ್ದು, ಪ್ರಾಣ ಕಳೆದುಕೊಳ್ಳುವ ಸಂಭವ ಹೆಚ್ಚಾಗಿದೆ. ಹೆಲ್ಮೆಟ್ ಧರಿಸಿ. ದ್ವಿಚಕ್ರ ವಾಹನ ಚಲಾಯಿಸುವುದರಿಂದ ತಲೆಗೆ ಪೆಟ್ಟು ಬೀಳುವುದನ್ನು ತಪ್ಪಿಸಬಹುದು ಹಾಗೂ ಶೇ.42ರಷ್ಟು ಪ್ರಮಾಣದಲ್ಲಿ ಸಾವು ತಪ್ಪಿಸಬಹುದು. ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ವಾಹನ ಚಾಲಕರು ವಾಹನ ಚಾಲನೆಯ ಪರವಾನಗಿ, ವಿಮೆ ಮೊದಲಾದ ಅಗತ್ಯ ಮಾಹಿತಿಗಳನ್ನು ಹೊಂದಿರಲೇಬೇಕು ಎಂದರು.
ಇಂದಿನ ಯುವ ಪೀಳಿಗೆ ವಾಹನಗಳನ್ನು ನಡೆಸುವಾಗ ವೇಗದ ಮಿತಿ ದಾಟುತ್ತಿದ್ದಾರೆ ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ವೀಲಿಂಗ್ ಅಥವಾ ಸ್ಟೆಂಟ್ ಮಾಡಲು ಹೋಗಿ, ಜೀವ ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ವಾಹನ ನಡೆಸಲು ಬೇಕಾದ ಪರವಾನಗಿ ಇರುವುದಿಲ್ಲ. ದ್ವಿಚಕ್ರ ವಾಹನ ನಡೆಸುವಾಗ ಮೊಬೈಲ್ ಬಳಸುತ್ತಿರುವುದು ಹೆಚ್ಚಾಗುತ್ತಿದೆ. ವಾಹನದಲ್ಲಿ ನಿಯಮ ಮೀರಿ ಓವರ್ ಲೋಡ್ ಮಾಡಬಾರದು. ಚಾಲನಾ ಪರವಾನಗಿ, ವಾಹನ ನೋಂದಣಿ ದಾಖಲೆ, ವಾಹನ ವಿಮೆ ಕಡ್ಡಾಯವಾಗಿ ಹೊಂದಿರಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆಯಿಂದ ಅಪಘಾತಗಳ ಸಾಧ್ಯತೆ ಹೆಚ್ಚಾಗಿದ್ದು ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅಪರಾಧವಾಗಿದೆ. ಮೋಜಿಗಾಗಿ ವಾಹನವನ್ನು ಅಡ್ಡಾದಿಡ್ಡಿಯಾಗಿ ಅತಿ ವೇಗವಾಗಿ ಚಲಾಯಿಸುವುದು ಪ್ರಾಣಕ್ಕೆ ಕುತ್ತು ತರಬಹುದು ಎಂದು ಅಪಘಾತಗಳಿಗೆ ಸಂಬಂಸಿದ ಚಿತ್ರಗಳು, ವಿಡಿಯೋ ತೋರಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಬೀನಾ ಮಾತನಾಡಿ, ಪಠ್ಯದ ಹೊರತಾದ ಓದು ನಮ್ಮ ಜ್ಞಾನಾರ್ಜನೆ ಹೆಚ್ಚಿಸುತ್ತದೆ. ರಸ್ತೆ ಸುರಕ್ಷತೆಯ ಬಗ್ಗೆ ಮಕ್ಕಳು ಚಿಕ್ಕಂದಿನಿಂದಲೇ ನಿಯಮಗಳನ್ನು ಅರಿತು ಪಾಲಿಸುವುದು ಒಳ್ಳೆಯದು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ.ವಿಜಯ ಕುಮಾರ್, ಕಾರ್ಯಕ್ರಮದ ನಿರ್ವಾಹಕ ಮಿಥುನ್ ಮೊದಲಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….