ದೊಡ್ಡಬಳ್ಳಾಪುರ, (ಡಿ.28): ಆರೋಗ್ಯ ಕವಚ-108ರ ಸೇವೆಯನ್ನು ಸಮರ್ಪಕವಾಗಿ ಒದಗಿಸಲು ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐದು ಆಂಬುಲೆನ್ಸ್ಗಳಲ್ಲಿ ಮೂರು ಆಂಬುಲೆನ್ಸ್ಗಳು ದುರಸ್ತಿಗೆ ಬಂದಿದ್ದು, ಕಂಡುಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳ ಉದಾಸೀನದಿಂದಾಗಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿಫಲವಾಗುತ್ತಿದೆ.
ತಾಲೂಕಿನ ನಗರ, ಘಾಟಿ ಸುಬ್ರಹ್ಮಣ್ಯ, ಮಧುರೆ, ದೊಡ್ಡಬೆಳವಂಗಲ, ಸಾಸಲು ಹೋಬಳಿಯ ಜನನತೆಯ ತುರ್ತು ಚಿಕಿತ್ಸೆಗೆಂದು ಆಂಬುಲೆನ್ಸ್ಗಳನ್ನು ನೀಡಲಾಗಿತ್ತು.
ಇದರಲ್ಲಿ ಮಧುರೆ ಹೋಬಳಿ ವ್ಯಾಪ್ತಿಯ ಆಂಬುಲೆನ್ಸ್ ದುರಸ್ತಿಗೆ ಬಂದು ವರ್ಷಗಳಾಗಿದ್ದು, ಕಾಣೆಯಾಗಿದೆ. ಈ ಕುರಿತಂತೆ ಸ್ಥಳೀಯ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಸಾಸಲು ಆಂಬುಲೆನ್ಸ್ ಅನ್ನು ಮಧುರೆಗೆ ನೀಡಿದ್ದರು. ಇದರಿಂದ ತಾಲೂಕಿನಿಂದ 36 ಕಿಮೀ ದೂರದಲ್ಲಿರುವ ಸಾಸಲು ಹೋಬಳಿ ಜನತೆ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಇಲ್ಲದೆ ವರ್ಷಗಳಿಂದ ಪರದಾಡುವಂತಾಗಿದೆ.
ಆಷಾಢದಲ್ಲಿ ಅಧಿಕ ಮಾಸ ಎಂಬಂತೆ ಘಾಟಿ ಸುಬ್ರಹ್ಮಣ್ಯ ವ್ಯಾಪ್ತಿಗೆ ನೀಡಿದ್ದ ಆಂಬುಲೆನ್ಸ್ ದುರಸ್ತಿಗೆ ಬಂದು 45 ದಿನಗಳಿಗೆ ಹೆಚ್ಚು ದಿನವಾಗಿದ್ದು ಅಧಿಕಾರಿಗಳು ಗಮನಹರಿಸದೆ ಉಳಿದಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ದೊಡ್ಡಬೆಳವಂಗಲ ಹೋಬಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಬುಲೆನ್ಸ್ ದುರಸ್ತಿಗೆ ತೆರಳಿ 10 ದಿನಗಳಾಗಿದೆ. ಪ್ರಸ್ತುತ ಉಳಿದ ಎರಡು 108 ಆಂಬುಲೆನ್ಸ್ಗಳು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಜನತೆಯ ತುರ್ತು ಚಿಕಿತ್ಸೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ಆರೋಗ್ಯ ಕವಚ-108ರ ಸೇವೆಯನ್ನು ಸಮರ್ಪಕವಾಗಿ ಒದಗಿಸಲು ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಆಕ್ರೋಶದಿಂದ ಹೇಳಿದೆ.
ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳ ತಾತ್ಸಾರದಿಂದ ದೊಡ್ಡಬಳ್ಳಾಪುರ ತಾಲೂಕಿನ ಬಡ ಜನತೆ, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಿಗದೆ ಜೀವಕೈಲಿಡಿದು ಕಾಯುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….