ಬೆಂಗಳೂರು, (ಮೇ.20): ಹದಿನಾರನೇ ವಿಧಾನಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಇಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು.
ಇಲ್ಲಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಭಯ ನಾಯಕರಿಗೆ ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು.
ಹತ್ತು ವರ್ಷಗಳ ನಂತರ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಈ ಹಿಂದೆ ಇದೇ ವೇದಿಕೆಯಲ್ಲಿಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಈ ಇಬ್ಬರು ನಾಯಕರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಅಲ್ಲದೇ, ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಹಾಗೂ ಡಿ.ಕೆ. ಶಿವಕುಮಾರ್ ಅವರು ನೊಣವಿನಕೆರೆಯ ಗಂಗಾಧರ ಅಜ್ಜಯ್ಯ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ನೂತನ ಶಾಸಕರಾಗಿ ಆಯ್ಕೆಯಾಗಿರುವ ಡಾ.ಜಿ.ಪರಮೇಶ್ವರ್, ಕೆ. ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್,ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ ಹಾಗೂ ಜಮೀರ್ ಅಹ್ಮದ್ ಖಾನ್ ಅವರೂ ಕೂಡಾ ಇದೇ ಸಂದರ್ಭದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಡಾ ಜಿ ಪರಮೇಶ್ವರ್ ಅವರು ಭಾರತದ ಸಂವಿಧಾನದ ಹೆಸರಿನಲ್ಲಿ, ಸತೀಶ್ ಜಾರಕಿಹೊಳಿ ಅವರು ಬುದ್ದ-ಬಸವ- ಅಂಬೇಡ್ಕರ್ ಅವರ ಹೆಸರಿನಲ್ಲಿ, ಹಾಗೂ ಉಳಿದ ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಎಲ್ಲರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಜಮೀರ್ ಅಹಮದ್ ಖಾನ್ ಅವರು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಗಮನಾರ್ಹವಾಗಿತ್ತು. ಅಲ್ಲದೆ, ಅಲ್ಲಾಹ್ ಮತ್ತು ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಗಣ್ಯರಿಗೂ ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು.
ಪ್ರಮಾಣ ವಚನ ಸಮಾರಂಭ ಮುಕ್ತಾಯವಾಗುತ್ತಿದಂತೆ ಗುಂಪು ಛಾಯಾಗ್ರಹಣ ( ಗ್ರೂಪ್ ಫೋಟೋ ) ಅವಕಾಶ ಮಾಡಿಕೊಡಲಾಗಿತ್ತು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ , ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಎ.ರಾಜಾ, ಭಾರತೀಯ ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಕ್ಷದ ಮುಖಂಡ ಸೀತಾರಾಮ್ ಯೆಚೂರಿ, ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಮತ್ತು ಅಲ್ಲಿನ ಮಾಜಿ ಮುಖ್ಯಮಂತ್ರಿ ಡಾ ಫಾರೂಕ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಚಲನ ಚಿತ್ರ ರಂಗದ ಕಲಾವಿದರು ಮತ್ತು ತಂತ್ರಜ್ಞರು, ಅವರೂ ಸೇರಿದಂತೆ ಹಲವು ಗಣ್ಯರು ಈ ವಿಶೇಷ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಗಣ್ಯರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಒಳಗೊಂಡಂತೆ ಸಾರ್ವಜನಿಕರು ಈ ಸಮಾರಂಭದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಮಾತನಾಡಿದ ರಾಹುಲ್ ಗಾಂಧಿ, ರಾಜ್ಯದ ಜನತೆಗೆ ನನ್ನ ಕಡೆಯಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಧನ್ಯವಾದಗಳನ್ನು ತಿಳಿಸುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣವಾಗಿ ಬಹುಮತ ಬಂದಿದೆ. ನಾವು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನಡೆಸುತ್ತೇವೆ. ನಾವು ಕೊಟ್ಟ ಗ್ಯಾರಂಟಿ ಘೋಷಣೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ – ಪ್ರತಿತಿಂಗಳು ಮಹಿಳೆಯರಿಗೆ 2 ಸಾವಿರ ರೂ, ಗೃಹಜ್ಯೋತಿ- 200 ಯುನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ-10 ಕೆಜಿ ಅಕ್ಕಿ ಉಚಿತ, ಶಕ್ತಿ-ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ, ಯುವನಿಧಿ- ಪದವಿಧರರಿಗೆ 3,000 ರೂ. ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 1,500 ರೂ. ನೀಡುತ್ತೇವೆ. ನಾವು ಕೊಟ್ಟ ಮಾತನ್ನು ನಾವು ಈಡೇರಿಸುತ್ತೇವೆ.
ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ಇಂದಿನ ಸಂಪುಟದಲ್ಲೇ 5 ಗ್ಯಾರಂಟಿ ಯೋಜನೆ ಜಾರಿಗೆ ಬರಲಿವೆ ಎಂದು ರಾಹುಲ್ ಗಾಂಧಿ ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….