ದೊಡ್ಡಬಳ್ಳಾಪುರ, (ಮೇ.26): ಪರಿಸರ ಮಾಲಿನ್ಯದಿಂದಾಗಿ ಜಾಗತಿಕ ತಾಪಮಾನ ಹೆಚ್ಚಳ, ಓಜೋನ್ ಪದರಕ್ಕೆ ಹಾನಿ ಮೊದಲಾದ ಅಪಾಯಗಳು ಉಂಟಾಗುತ್ತಿದ್ದು, ಮುಂದಿನ ಪೀಳಿಗೆಗಾಗಿ ನಾವು ಅರಣ್ಯ ಹಾಗೂ ಪ್ರಾಕೃತಿಕ ಸಂಪತ್ತು ಹೆಚ್ಚು ಮಾಡಬೇಕಾದ ಹೊಣೆಗಾರಿಕೆಯಿದೆ. ಈ ದಿಸೆಯಲ್ಲಿ ಇಂದಿನ ಪೀಳಿಗೆಗೆ ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಅರವಿಂದ ಸಾಯಿಬಣ್ಣ ಹಾಗರಗಿ ಹೇಳಿದರು.
ನಗರದ ನ್ಯಾಯಾಲಯದ ಮುಂಭಾಗ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಹಾಗೂ ವಯೋವೃದ್ಧರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಊರಿಗೊಂದು ವನ ಊರಿಗೊಂದು ಕೆರೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಡುಗಳು ಕಡಿಮೆಯಾಗುತ್ತಿದ್ದು, ಮುಂದಿನ ಪೀಳಿಗೆಯ ದೃಷ್ಟಿಯಿಂದ ವನ ಸಂಪತ್ತು ಹೆಚ್ಚಾಗಬೇಕಿದೆ. ಆದರೆ ಇದು ಅರಣ್ಯ ಇಲಾಖೆಯ ಕಾರ್ಯವಷ್ಟೇ ಅಲ್ಲದೇ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು. ಮಕ್ಕಳ ಮೇಲೆ ದೌರ್ಜನ್ಯ ಎಸಗುವವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದೆ. ಬಾಲ ಕಾರ್ಮಿಕ ಪದ್ದತಿ ಸಹ ಮಕ್ಕಳ ಮೇಲಿನ ಶೋಷಣೆಯ ಬಾಗವಾಗಿದೆ. ಇತ್ತೀಚೆಗೆ ಬಂದ ಯುಪಿಎಸ್ಸಿ ಫಲಿತಾಂಶದಲ್ಲಿ 25ರಲ್ಲಿ 5 ಮಂದಿ ಕೆಳಸ್ತರದಿಂದ ಬಂದವರಾಗಿದ್ದು, ಶಿಕ್ಷಣಕ್ಕೆ ಒತ್ತು ನೀಡಿದರೆ ಎಂತಹ ಸಾಧನೆಯನ್ನಾದರೂ ಮಾಡುತ್ತಾರೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಆರ್.ದೀಪ ಮಾತನಾಡಿ, ಊರಿಗೊಂದು ವನ ಊರಿಗೊಂದು ಕೆರೆ ಕಾರ್ಯಕ್ರಮ ಜಿಲ್ಲೆಯಾದ್ಯಂತ 7 ಸಾವಿರ ಕಾರ್ಯಕ್ರಮ ನಡೆಯುತ್ತಿದ್ದು, ತಾಲೂಕಿನಲ್ಲಿ 3 ಸಾವಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಿಡಗಳನ್ನು ನೆಡುವುದರ ಜೊತೆಗೆ ಪೋಷಣೆ ಮಾಡಬೇಕು. ಕೆರೆಗಳನ್ನು ಮಲಿನ ಮಾಡಬಾರದು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಜಾರಿಗೆ ತಂದಿರುವ ಫೋಕ್ಸೋ ಕಾಯ್ದೆ ಬಗ್ಗೆ ಹೆಚ್ಚಿನ ಅರಿವು ಬೇಕಿದೆ. 18 ವರ್ಷಕ್ಕಿಂತಲೂ ಕಡಿಮೆ ಇರುವ ಮದುವೆ ಮಾಡಿದರೆ ಪೋಷಕರಾದಿಯಾಗಿ ಮದುವೆ ಮಾಡಿಸಿದವರೂ ಸಹ ಶಿಕ್ಷೆಗೆ ಒಳಗಾಗುತ್ತಾರೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಹಾಗೂ ವಯೋವೃದ್ಧರ ಹಿತರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷೆ ಎಚ್.ವಿ.ಭಾಗ್ಯಲಕ್ಷ್ಮೀ ಮಾತನಾಡಿ, ತಾಲೂಕಿನ ಹಳೇಕೋಟೆಯಲ್ಲಿ ಕ್ರಷರ್‍ಗಳಿಂದ ಪರವಾನಗಿಯ ನಿಯಮ ಉಲ್ಲಂಘಿಸಿ, ಬಂಡೆಗಳನ್ನು ಕೊರೆಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಪ್ರಾಕೃತಿಕ ಸಂಪತ್ತುಗಳನ್ನು ನಿಯಮಬಾಹಿರವಾಗಿ ಬರಿದು ಮಾಡುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಂ.ಸುಷ್ಮಾ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಭಾರತಿ ಶ್ಯಾಮರಾಜ್ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….