ಬೆಂಗಳೂರು, (ಮೇ.26): ನರೇಂದ್ರ ಮೋದಿ ಅವರು, ದೇಶದ ಪ್ರಧಾನಿಯಾಗಿ ಇಂದು (ಮೇ.26ರಂದು) 09 ವರ್ಷ ಪೂರ್ಣಗೊಳ್ಳಲಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯಲಿದ್ದು, ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯತಂತ್ರವನ್ನು ಬಿಜೆಪಿ ಹಾಕಿಕೊಂಡಿದೆ.
ಮೋದಿ ಅವರು ಮೊದಲ ಬಾರಿ 2014ರ ಮೇ 26ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಾದ ನಂತರ 2019ರಲ್ಲಿ ಪುನಃ ಅಧಿಕಾರಕ್ಕೆ ಬಂದಿದ್ದರು. 2ನೇ ಅವಧಿಯಲ್ಲಿ ಅವರು ಮೇ 30ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದರು.
ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದು, ಕೋವಿಡ್ ನಂತಹ ಮಹಾಮಾರಿ ಭಾರತ ಸೇರಿದಂತೆ ಜಗತ್ತನ್ನೇ ತಲ್ಲಣಗೊಳಿಸಿತ್ತು. ಟೀಕೆ, ಟಿಪ್ಪಣಿಯ ನಡುವೆಯೂ ಭಾರತ ಕೋವಿಡ್ ಸೋಂಕನ್ನು ಸಮರ್ಥವಾಗಿ ನಿಭಾಯಿಸಿ ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೊಳಾಗಿತ್ತು.
ಪಿಎಂ ಮೋದಿ ಅವರು ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರ ಉಪಸ್ಥಿತಿಯಲ್ಲಿ ವಿಶ್ವಾಸ ಹೊಂದಿರುವ ಪ್ರಬಲ ನಾಯಕರಾಗಿದ್ದಾರೆ ಮತ್ತು ಬೆಳೆಯುತ್ತಿರುವ ಆರ್ಥಿಕತೆಯನ್ನು ಪ್ರತಿನಿಧಿಸುತ್ತಿದ್ದಾರೆ. ಬಲಿಷ್ಠ ಚೀನಾವನ್ನು ಎದುರಿಸುವ ಶಕ್ತಿಯನ್ನು ಹೊಂದಿರುವ ಭಾರತ ದೇಶದ ಪರವಾಗಿ ಇತರೆ ಪಶ್ಚಿಮಾತ್ಯ ರಾಷ್ಟ್ರಗಳು ಬೆನ್ನೆಲುಬಾಗಿ ನಿಂತಿದ್ದು ಇದಕ್ಕೆಲ್ಲ ಕಾರಣ ಮೋದಿ ಎನ್ನುವುದು ಹಲವರ ಅಭಿಪ್ರಾಯ.
ಇನ್ನು ಮೋದಿ ಪ್ರಧಾನಿಯಾಗಿ 09 ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದು, ಅಧಿಕಾರಕ್ಕೆ ಬಂದು 09 ವರ್ಷವಾದರು ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿದ್ದಾರೆ ಎಂದ ಕಪ್ಪು ಹಣ ತರಲಿಲ್ಲವೇಕೆ ಎಂದು ಪ್ರಶ್ನಿಸುತ್ತಿದ್ದಾರೆ.
2014 ರ ಲೋಕಸಭಾ ಚುನಾವಣೆಯ ವೇಳೆ ಸ್ವಿಸ್ ಬ್ಯಾಂಕ್‌ನಲ್ಲಿರುವ ಹಣದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಬಿಜೆಪಿಯು ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತೀಯ ಹಣವನ್ನು ಭಾರತಕ್ಕೆ ತರುವುದಾಗಿ ಭರವಸೆಗಳನ್ನು ನೀಡಿತ್ತು.
ಚುನಾವಣಾ ಫಲಿತಾಂಶದ ವೇಳೆ ಆ ಆಶ್ವಾಸನೆ ಫಲ ನೀಡಿತ್ತು. ಆದರೆ, 09 ವರ್ಷಗಳಾದರೂ ಕಪ್ಪು ಹಣ ಮಾತ್ರ ಭಾರತಕ್ಕೆ ಹಿಂದಿರುಗಿ ಬಂದಿಲ್ಲ. ಈ ನಡುವೆ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ಮೊತ್ತ ಮತ್ತಷ್ಟು ಏರಿಕೆಯಾಗಿದೆ ಎನ್ನುತ್ತಿದೆ ವರದಿಗಳು. ಇದು ಕಳೆದ 15 ವರ್ಷಗಳಲ್ಲೆ ಭಾರತದಿಂದ ಸ್ವಿಸ್ ಬ್ಯಾಂಕಿಗೆ ಹರಿದ ಅತಿ ಹೆಚ್ಚಿನ ಮೊತ್ತ ಎಂದು ಸ್ವಿಟ್ಜರ್ಲ್ಯಾಂಡ್‌ನ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….