ದೊಡ್ಡಬಳ್ಳಾಪುರ, (ಮೇ.31): ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಚಿರತೆಗಳು ಮತ್ತೆ ತಾಲೂಕಿನಲ್ಲಿ ಸದ್ದು ಮಾಡುತ್ತಿದ್ದು, ಇತ್ತೀಚಿಗಷ್ಟೇ ಹೀರೆಮುದ್ದೇನಹಳ್ಳಿ ಗ್ರಾಮದಲ್ಲಿ ಎರಡು ಚಿರತೆಗಳು ದಾಳಿ ನಡೆಸಿ ಹಸುವನ್ನು ಬಲಿ ಪಡೆದಿದ್ದ ಘಟನೆ ಬೆನ್ನಲ್ಲೇ, ಇಂದು ಕೆಳಗಿನ ಜೂಗನಹಳ್ಳಿ ಗ್ರಾಮದ ಹೊರವಲಯದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ನಡೆಸಿ, ಕೊಂದುಹಾಕಿರುವ ಘಟನೆ ಮಂಗಳವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೆಳಗಿನಜೂಗಾನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ರೈತ ಮಹಿಳೆ ಗೌರಮ್ಮ ಎಂದಿನಂತೆ ತಮ್ಮ ಹಸುಗಳನ್ನು ಮೇಯಿಸಲು ತೆರಳಿದ್ದಾರೆ. ಈ ವೇಳೆ ಪ್ರತಿದಿನ ನೀರು ಕುಡಿಸುವ ಜಾಗದಲ್ಲಿ ಚಿರತೆ ಏಕಾಏಕಿ ಹಸುವಿನ ಮೇಲೆ ಎರಗಿ ಗಾಯಪಡಿಸಿದೆ. ಇದನ್ನು ಕಂಡ ಗೌರಮ್ಮ ಹಸುವನ್ನು ಕಾಪಾಡಲು ಕೂಗಿಕೊಂಡಾಗ ಚಿರತೆ ಸ್ಥಳದಿಂದ ಪರಾರಿಯಾಗಿದೆ.
ಚಿರತೆ ಇಲ್ಲದ ಸಮಯದಲ್ಲಿ ಸ್ಥಳಕ್ಕೆ ಬಂದು ನೋಡಿದಾಗ ಹಸು ಪ್ರಾಣ ಬಿಟ್ಟಿರುವುದನ್ನು ತಿಳಿದು ಬಂದಿದೆ. ಮೃತ ಹಸುವನ್ನು ಬಿಟ್ಟು ಮಿಕ್ಕುಳಿದ ಹಸುಗಳನ್ನು ಮನೆಗೆ ಹೊಡೆದುಕೊಂಡು ಬಂದಿರುವ ಗೌರಮ್ಮ. ಇಂದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ, ನಡೆದ ಘಟನೆಯನ್ನು ವಿವರಿಸಿ, ಸಾವಿರಾರು ನಷ್ಟವಾಗಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ತಾಲೂಕಿನ ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಜಾನುವಾರುಗಳ ಮೇಲೆ ಚಿರತೆ ದಾಳಿಯಿಂದ ರೈತರು ಭಯ ಭೀತರಾಗಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….