ಬೆಂಗಳೂರು, (ಜೂ.17): ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ʻಗೃಹ ಜ್ಯೋತಿʼ ಯೋಜನೆಯ ಫಲಾನುಭವಿಗಳಾಗಲು ಜೂನ್ 18ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿಗಳನ್ನು ಮೊಬೈಲ್, ಸೇವಾ ಸಿಂಧು ಪೋರ್ಟಲ್, ನಾಡ ಕಚೇರಿ, ಗ್ರಾಮ ಒನ್, ಬೆಂಗಳೂರು ಒನ್ ಸರ್ಕಾರಿ ಸಂಸ್ಥೆಗಳ ಬಿಲ್ ಪಾವತಿ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸರ್ಕಾರ ಜೂನ್ 15ರಿಂದಲೇ ಅರ್ಜಿ ಸಲ್ಲಿಕೆಗೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತಾದರೂ ತಂತ್ರಾಂಶದಲ್ಲಿ (ಸಾಫ್ಟ್ ವೇರ್) ಕೆಲವು ತಾಂತ್ರಿಕ ಅಡಚಣೆಗಳು ಕಾಣಿಸಿಕೊಂಡಿತ್ತು. ಸಮಸ್ಯೆಗಳು ಸಣ್ಣದೇ ಆದರೂ ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಎಲ್ಲವನ್ನೂ ಸರಿಪಡಿಸಿಕೊಂಡೇ ಜನರ ಮುಂದೆ ಬರುವ ದೃಷ್ಟಿಯಿಂದ ಅರ್ಜಿ ಸ್ವೀಕಾರ ದಿನಾಂಕವನ್ನು ಜೂನ್ 18ಕ್ಕೆ ಮುಂದೂಡಲಾಗಿತ್ತು.
ಹಿಂದಿನ ಸೂಚನೆಯ ಪ್ರಕಾರ ಕಂಪ್ಯೂಟರ್ ಹಾಗೂ ಆಯಂಡ್ರಾಯ್ಡ್ ಮೊಬೈಲ್ ಮೂಲಕ ಅರ್ಜಿ ಸಲ್ಲಿಕೆಗೆ ಜೂನ್ 18ರಿಂದ ಅವಕಾಶ ನೀಡಲಾಗಿದೆ. ಅಂತಿಮ ದಿನಾಂಕವನ್ನು ಮೊದಲು ಜುಲೈ 5 ಎಂದು ನಿಗದಿ ಮಾಡಲಾಗಿತ್ತು. ಇದೀಗ ಅದು ಜುಲೈ 8ಕ್ಕೆ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಯಾವುದೇ ರೀತಿಯ ತೊಂದರೆಗಳು ಆಗದಂತೆ ಇಂಧನ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಹೀಗೆ ಐದು ವಿಭಾಗಗಳಲ್ಲಿ ಜಾರಿ ಮಾಡಿಕೊಳ್ಳಲಾಗುತ್ತಿದೆ. ಹೊಸ ಮನೆ ಬಾಡಿಗೆದಾರರಿಗೆ ಸಹ ಗೃಹಜ್ಯೋತಿ ಭಾಗ್ಯವಿದ್ದು, ಹೊಸ ಮನೆಗೆ 53 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. 53 ಯೂನಿಟ್ ಜೊತೆ 10% ಪರ್ಸೆಂಟ್ ಅಂದರೆ 58 ಯೂನಿಟ್ ವಿದ್ಯುತ್ ಉಚಿತವಾಗಿದೆ.
ಅರ್ಜಿ ಸಲ್ಲಿಸುವವರು ಆರ್‌ಆರ್ ನಂಬರ್ ಜೊತೆಗೆ ಆಧಾರ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು.
ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಕರಾರು ಪತ್ರ ಅಥವಾ ವೋಟರ್ ಐಡಿ ಕಡ್ಡಾಯವಾಗಿದ್ದು, ಇವೆರಡರಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು.
ಅರ್ಜಿ ಸಲ್ಲಿಕೆಯನ್ನು ಇಂಧನ ಇಲಾಖೆ ಸರಳೀಕರಣ ಮಾಡಿದೆ. ಹಳ್ಳಿಗಳಲ್ಲಿ ಹಾಗೂ ನಗರ ಭಾಗಗಳಲ್ಲಿ ಬಾಡಿಗೆ ಇರುವವರ ದೃಷ್ಟಿಯಿಂದ ಸರಳೀಕರಣ ಮಾಡಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….