ದೊಡ್ಡಬಳ್ಳಾಪುರ, (ಜೂ.17): ತಾಲೂಕಿನ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ಕೆರೆ ನೀರಿನಿಂದ ಹಿಡಿದು ಶುದ್ಧ ಕುಡಿಯುವ ನೀರು ಸಹ ಕಲುಷಿತಗೊಂಡಿದ್ದು, ಗ್ರಾಮಕ್ಕೆ ಶುದ್ದ ನೀರಿಗಾಗಿ ಸರಬರಾಜು ಮಾಡುತ್ತಿದ್ದ ನೀರಿನ ಟ್ಯಾಂಕರ್‌ಗಳನ್ನು ಸಹ ನಿಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ಕಲುಷಿತ ನೀರು ಕುಡಿದು ರೋಗದಿಂದ ಸಾಯುವುದಕ್ಕಿಂತ ಹೋರಾಟ ಮಾಡಿಯೇ ಸಾಯುತ್ತೇವೆ ಎಂದು ಗ್ರಾಮಸ್ಥರು ತೀರ್ಮಾನಿಸಿದ್ದು, ಜೂನ್19ರಂದು ಬೆಳಿಗ್ಗೆ 11ಗಂಟೆಯಿಂದ ತಾಲೂಕು ಕಚೇರಿ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರು ಹೇಳಿದ್ದಾರೆ.
ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರಾದ ಸತೀಶ್, ಕೈಗಾರಿಕಾ ತ್ಯಾಜ್ಯ ಹಾಗೂ ನಗರಸಭೆ ಒಳಚರಂಡಿ ನೀರಿನಿಂದಾಗಿ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ಕೆರೆಗಳು ಕಲುಷಿತಗೊಂಡು ಕ್ಯಾನ್ಸರ್, ಮೂತ್ರಕೋಶಕ್ಕೆ ಸಂಬಂಸಿದ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಕೆರೆ ನೀರು ಕಲುಷಿತವಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಹೋರಾಟಗಳನ್ನು ನಡೆಸಿದ್ದಷ್ಟೇ ಅಲ್ಲದೇ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿ ಮನೆಮನೆಗೆ ತೆರಳಿ ಸಹಿ ಸಂಗ್ರಹಿಸಿ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಹಳ್ಳಿಗಳಿಗೆ ಬೇಟಿ ಕೊಟ್ಟ ಉಪವಿಭಾಗಾಧಿಕಾರಿಗಳು ನೀರನ್ನು ಪರೀಕ್ಷಿಸಿ ಜಕ್ಕಲಮಡುಗು ನೀರನ್ನು ನೀಡಲು ಆದೇಶ ಮಾಡಿದರು. ಇದರಂತೆ 43 ದಿನಗಳು ಟ್ಯಾಂಕರ್‍ಗಳಲ್ಲಿ ನೀರು ಸರಬರಾಜು ಮಾಡಲಾಯಿತು. ಈಗ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ.
ಗ್ರಾಮೀಣ ನೀರು ಸರಬರಾಜು ಇಲಾಖೆಯವರಿಗೆ ಮೌಖಿಕವಾಗಿ ನೀರು ಏಕೆ ಬರುತ್ತಿಲ್ಲವೆಂದು ಕೇಳಿದಾಗ ಟ್ಯಾಂಕರ್‌ಗಳ ವ್ಯವಸ್ಥೆ ಇಲ್ಲ ನೀವುಗಳೇ ಟ್ಯಾಂಕರ್ ವ್ಯವಸ್ಥೆ ಮಾಡಿಕೊಂಡು ನೀರನ್ನು ತೆಗೆದುಕೊಂಡು ಹೋಗಿ ಟ್ಯಾಂಕರ್ ಗಳ ಬಾಡಿಗೆಯ ಮೊತ್ತವನ್ನು ನಾವು ನೀಡುತ್ತೇವೆ ಎಂದು ಮೌಖಿಕವಾಗಿ ತಿಳಿಸಿದರು. ಅದರಂತೆ ರೈತರ ಟ್ಯಾಂಕರ್ ಗಳ ಮುಖಾಂತರ ನೀರನ್ನು ಸರಬರಾಜು ಮಾಡಿರುತ್ತೇವೆ ಆದರೆ ಇಲ್ಲಿವರೆವಿಗೂ ಸಹ ಟ್ಯಾಂಕರ್‌ಗಳ ಬಾಡಿಗೆ ಹಣವನ್ನು ಕೊಟ್ಟಿಲ್ಲ ನೀರು ಸರಬರಾಜು ದಿಢೀರನೇ ನಿಲ್ಲಿಸಿದ್ದಾರೆ.
ಶುದ್ಧ ಕುಡಿಯುವ ನೀರು ನಮ್ಮೆಲ್ಲರ ಮೂಲಭೂತ ಹಕ್ಕಾಗಿದೆ. ಚುನಾವಣೆಯಲ್ಲಿ ಶುದ್ಧ ನೀರು ಕೊಟ್ಟು ಜನರಿಂದ ಮತ ಹಾಕಿಸಿಕೊಂಡ ನಂತರ ಈಗ ನೀರು ನಿಲ್ಲಿಸಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ ಎಂದರು.
ಮಾತು ತಪ್ಪಿದ ಅಧಿಕಾರಿಗಳು: ಚುನಾವಣಾ ಸಮಯದಲ್ಲಿ ಜನರಿಗೆ ಬರೀ ರಾಜಕಾರಣಿಗಳು ಮಾತು ಜನರ ಮತಗಳಿಗಾಗಿ ಮೋಸ ಮಾಡುತ್ತಿಲ್ಲ. ಅಧಿಕಾರಿಗಳೂ ಸಹ ಮೋಸ ಮಾಡುತ್ತಿದ್ದಾರೆ ಎನ್ನುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಉಪವಿಭಾಗಾಧಿಕಾರಿಗಳ ಆದೇಶಕ್ಕೂ ಕಿಮ್ಮತ್ತು ಬೆಲೆಯಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ನೀರು ಕಲುಷಿತವಾಗುತ್ತಿರುವ ಕುರಿತು ಮಾಲಿನ್ಯ ನಿಯಂತ್ರಣ ಮಂಡಲಿ, ಹಸಿರು ನ್ಯಾಯಾಧಿಕರಣಕ್ಕೂ ದೂರು ಸಲ್ಲಿಸಲಾಗಿದೆ. ಆದರೆ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದರು.
ಮೊದಲು ನೀರು ಕೊಡಿ ಇಲ್ಲವೇ ಸಾಯುತ್ತೇವೆ: ಕಲುಷಿತ ನೀರು ಶುದ್ದೀಕರಣಕ್ಕಾಗಿ 132 ಕೋಟಿ ರೂ ವೆಚ್ಚದಲ್ಲಿ ಎಸ್‍ಟಿಪಿ ಘಟಕ ಸ್ತಾಪನೆಯಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇದು ಸಧ್ಯಕ್ಕೆ ಆಗದ ಮಾತು. ಮೊದಲು ನಮ್ಮೂರಿನ ಜನಕ್ಕೆ ಶುದ್ದ ನೀರು ಕೊಡಿ. ಹೀಗೆಯೇ ಕಲುಷಿತ ನೀರು ಕುಡಿದು ಸಾಯುವುದಕ್ಕಿಂತ ಹೋರಾಟ ಮಾಡಿಯೇ ಸಾಯುತ್ತೇವೆ. ಗ್ರಾಮಸ್ಥರಿಂದ ಜೂನ್.19ರಂದು ತಾಲೂಕು ಕಛೇರಿ ಮುಂಭಾಗ ಆಮರಣಾಂತಿಕ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕೂ ಜಗ್ಗದೇ ಇದ್ದರೆ ಹೋರಾಟದ ಸ್ವರೂಪ ಬದಲಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಕೆರೆ ಹೋರಾಟ ಸಮಿತಿ ಮುಖಂಡರಾದ ವಿಜಯ ಕುಮಾರ್, ಮುನಿಕೃಷ್ಣಪ್ಪ, ರಮೇಶ್ ಮೊದಲಾದವರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….