ದೊಡ್ಡಬಳ್ಳಾಪುರ, (ಜೂ.17): ಆಹಾರದಲ್ಲಿ ಕಲಬೆರಕೆ ಹಾವಳಿ ಹೆಚ್ಚಾಗಿದ್ದು, ಗುಣಮಟ್ಟದ ಪದಾರ್ಥಗಳಿಗಾಗಿ ಜನರು ಹುಡುಕಾಟ ನಡೆಸಬೇಕಾದ ಸ್ಥಿತಿ ಎದುರಾಗಿದೆ. ಈಗ ಪಡಿತರ ಅಕ್ಕಿ ವಿತರಣೆಯಲ್ಲಿ ಪ್ಲಾಸ್ಟಿಕ್ ರೇಷನ್ ಅಕ್ಕಿ ಬಂದಿದೆ ಎಂಬ ದೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಕೇಳಿ ಬಂದಿದೆ.
ಇನ್ನು ಇಂತಹ ಘಟನೆ ಇದೇ ಮೊದಲಲ್ಲ, ತುಂಬಾ ಸಲ ಬೆಳಕಿಗೆ ಬಂದಿದೆ. ಆದರೂ ಕೂಡ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸುತ್ತಿರುವುದು ಆತಂಕ್ಕೀಡು ಮಾಡಿದೆ. ಪಡಿತರ ಅಕ್ಕಿ ವಿತರಣೆಗೂ ಮುನ್ನ ಒಮ್ಮೆ ಪರಿಶೀಲಿಸುವ ಅವಶ್ಯಕತೆಯಿದೆ.
ಒಂದು ವರದಿ ಅನ್ವಯ ಜನಸಾಮಾನ್ಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಸಾರಯುಕ್ತ ಅಕ್ಕಿ ವಿತರಣೆ ಮಾಡುತ್ತಿದೆ. ಪ್ರತಿ 50 ಕೆಜಿ ಅಕ್ಕಿಯ ಚೀಲದಲ್ಲಿ ಅರ್ಧ ಕೆಜಿಯಷ್ಟು ಪೋಷಕಾಂಶ (ವಿಟಾಮಿನ್ ಎ ಮತ್ತು ಡಿ ಐರನ್, ಫೋಲಿಕ್ ಆಸಿಡ್, ಬಿ ಕಾಂಪ್ಲೆಕ್ಸ್, ಜಿಂಕ್ ಹಾಗೂ ಐಯೋಡಿನ್) ಭರಿತ ಸಾರವರ್ಧಿತ ಅಕ್ಕಿ ಬೆರೆಸಿ ವಿತರಣೆ ಮಾಡಲಾಗುತ್ತಿದೆ.
ಸಾರವರ್ಧಿತಗೊಳಿಸಿರುವ (ಫೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ನೆನೆದು ಉಬ್ಬಿದ ರೀತಿಯಲ್ಲಿರುವುದು ಆತಂಕ ಮೂಡಿಸುತ್ತದೆ. ಆದರೆ, ಇದು ರಕ್ತ ಹೀನತೆ, ಅಪೌಷ್ಟಿಕತೆ ನಿವಾರಣೆ, ಮಧುಮೇಹ, ಬಿಪಿಯಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಚಿಕ್ಕಮಕ್ಕಳಿಗೆ ಈ ಪಡಿತರ ಅಕ್ಕಿ ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹವನ್ನು ತಂಪಾಗಿಡುತ್ತದೆ ಎನ್ನುತ್ತದೆ ವರದಿ.
ಆದರೆ ಈ ಕುರಿತಂತೆ ಪ್ರಚಾರ ನೀಡಿ ಜನಸಾಮಾನ್ಯರ ಅನುಮಾನ ದೂರ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಇನ್ನೂ ಶುಕ್ರವಾರ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಡಿಪಿ ಸಭೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಎಂದು ಪತ್ತೆಯಾಗಿರುವ ವರದಿಯನ್ನು ಪ್ರಸ್ತಾಪವಾಗಿದ್ದು, ಪ್ಲಾಸ್ಟಿಕ್ ಅಕ್ಕಿ ಸಾಮಾನ್ಯವಾಗಿ ಎಲ್ಲೂ ಪತ್ತೆಯಾಗಿಲ್ಲ, ಅಕ್ಕಿಯಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಪ್ರತಿ 100 ಕೆಜಿ ಅಕ್ಕಿಗೆ 01ಕೆಜಿ ಫೋರ್ಟಿಫೈಡ್ (fortified rice)ಅಕ್ಕಿಯನ್ನು ಬೆರೆಸುತ್ತಾರೆ, ನೆಲಮಂಗಲದಲ್ಲಿ ಅದೇ ರೀತಿ ಆಗಿರಬಹುದು ಇದರ ಬಗ್ಗೆ ಪರಿಶೀಲಿಸಿ ಶೀಘ್ರ ವರದಿ ನೀಡಿ ಎಂದು ಉಸ್ತುವಾರಿ ಸಚಿವ ಮುನಿಯಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….