ದೊಡ್ಡಬಳ್ಳಾಪುರ, (ಜೂ.24): ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ವತಿಯಿಂದ ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ ರಾತ್ರಿ ಹಗಲು ನಿರಂತರವಾಗಿ ನಡೆಸುತ್ತಿರುವ ಅಮರಣಾಂತರ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಉಪವಾಸ ಸತ್ಯಾಗ್ರಾಹ ನಡೆಸುತ್ತಿರುವವರನ್ನು ಯಾರೊಬ್ಬ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಭೇಟಿ ಮಾಡಿ ಸಮಸ್ಯೆಯನ್ನು ಕೇಳಲು ಬಂದಿಲ್ಲ. ಹೀಗಾಗಿ ನಮ್ಮೂರುಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವವರೆಗೂ ಉಪವಾಸ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆಯದೇ ರಾತ್ರಿ ಹಗಲು ನಿರಂತರವಾಗಿ ಮುಂದುವರೆಸುವುದಾಗಿ ವೇದಿಕೆಯ ಸಂಚಾಲಕರು ತಿಳಿಸಿದ್ದಾರೆ.
ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿರುವ ಜಿಂಕೆಬಚ್ಚಹಳ್ಳಿ ಗ್ರಾಮದ ಸತೀಶ್ ಮಾಹಿತಿ ನೀಡಿ, ನಮ್ಮೂರಿನ ಕೆರೆಗಳು ಕಲುಷಿತವಾಗಿರುವುದೇ ನಗರಸಭೆ ವ್ಯಾಪ್ತಿಯಿಂದ ಬರುತ್ತಿರುವ ಒಳಚರಂಡಿ ನೀರು, ಬಾಶೇಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಬರುತ್ತಿರುವ ಒಳಚರಂಡಿ ನೀರಿನಿಂದ. ಕೆರೆಯ ನೀರು ಕಲುಷಿತವಾದ ನಂತರ ಮಜರಾಹೊಸಹಳ್ಳಿ, ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಅಂತರ್ಜಲ ಕಲುಷಿತವಾಗಿ ಕುಡಿಯುವ ನೀರಿಗು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಗಳ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಬರುವ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಎಂದು ಪ್ರಯೋಗಾಲಯದ ವರದಿಯೇ ತಿಳಿಸಿದೆ. ಹಾಗಾಗಿಯೇ ರಾಜ್ಯ ವಿಧಾನ ಸಭಾ ಚುನಾವಣ ಸಂದರ್ಭದಲ್ಲಿ ಮತದಾನ ಮಾಡದೇ ಇರಲು ಬಹಿಷ್ಕಾರ ಮಾಡಿದ್ದೆವೆ. ಆದರೆ ಚುನಾವಣ ಅಧಿಕಾರಿಗಳು ನೀಡಿದ ಭರವಸೆ ಹಾಗೂ ಗ್ರಾಮಗಳಲ್ಲಿನ ನೀರಿನ ಘಟಕಗಳಿಗೆ ಜಕ್ಕಲಮೊಡಗು ಜಲಾಶಯದಿಂದ ಬರುವ ನೀರನ್ನು ಟ್ಯಾಂಕರ್ಗಳ ಮೂಲಕ ಸರಬರಾಜು ಮಾಡಲು ಪ್ರಾರಂಭಿಸಿದ್ದರಿಂದ ಮತದಾನ ಮಾಡಿದ್ದೇವೆ. ಆದರೆ ಅಧಿಕಾರಿಗಳು ನೀಡಿದ್ದ ಭರವಸೆ ಚುನಾವಣೆ ಮುಕ್ತಾಯವಾದ ನಂತರ ಸುಳ್ಳಾಗಿದೆ. ಟ್ಯಾಂಕರ್ ಗಳ ಮೂಲಕ ಸರಬರಾಜು ಮಾಡುತ್ತಿದ್ದ ಕುಡಿಯುವ ನೀರನ್ನು ನಿಲ್ಲಿಸಿದ್ದಾರೆ. ನಮ್ಮ ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವವರೆಗೂ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದರು.
ಸೋಮವಾರದಿಂದ ಉಪವಾಸ ಸತ್ಯಾಗ್ರಾಹದಲ್ಲಿ ಪ್ರತಿ ಮನೆಯಿಂದಲೂ ಒಬ್ಬರಂತೆ ಭಾಗವಹಿಸಲಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗಿರುವ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಭಾನುವಾರ ಸಭೆಗಳು ನಡೆಯಲಿವೆ. ಪ್ರತಿ ಮನೆಯಿಂದಲು ಒಬ್ಬರು ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….