ದೊಡ್ಡಬಳ್ಳಾಪುರ, (ಜೂ.26): ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಈ ಸಾಲಿನಲ್ಲಿ ಪರಿಸರ ಸಂರಕ್ಷಣೆ, ಘಟಕವಾರು ತರಬೇತಿ ಮೊದಲಾಗಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲು ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಂಶೋಧನೆ ಮತ್ತು ತರಬೇತಿ ನೀಡುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ತಿಳಿಸಿದ್ದಾರೆ.
ನಗರದ ಬೆಸೆಂಟ್ ಪಾರ್ಕ್ ನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಬಿರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ವಾಯು, ನೀರು, ಆಕಾಶ, ಅಗ್ನಿ, ಪೃಥ್ವಿ ಪಂಚಭೂತಗಳನ್ನು ಸಂರಕ್ಷಣೆ ಮಾಡುವ ಬಗ್ಗೆ ಅರಿವು ಮೂಡಿಸುವುದು. ಇಂದಿನ ಪೀಳಿಗೆಗೆ ಪರಿಸರದ ಜ್ಞಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಬೀಜದುಂಡೆಗಳು, ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಉಚಿತ ಸಸಿಗಳನ್ನು ನೀಡುವಂತೆ ಅರಣ್ಯ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ. ವರ್ಚುಯಲ್ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ ಚಿತ್ರಕಲೆ, ಹಾಡು, ಲೇಖನಗಳನ್ನು ಬರೆಯುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಭಾಗವಹಿಸುತ್ತಾರೆ. ಘಟಕವಾರು ತರಬೇತಿಗಳನ್ನು ರೂಪಿಸಿದ್ದು, ಇಂದು ಘಟಕದಲ್ಲಿ 32 ಸದಸ್ಯರಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ವಿವಿಧ ತರಬೇತಿ ನೀಡುವ ನಿಟ್ಟಿನಲ್ಲಿ ತರಬೇತಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಘಟಕಗಳಲ್ಲಿ ತರಬೇತಿ ನೀಡುವ ಶಿಕ್ಷಕರಿಗೆ ಗೌರವ ಧನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಸದಸ್ಯರ ಹೆಚ್ಚು ಮಾಡುವ ಗುರಿ: ಕೊವಿಡ್-19 ಪ್ರಭಾವದಿಂದ ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದ್ದು, ಪ್ರಸ್ತುತ 4.5 ಲಕ್ಷ ಆಗಿದೆ. ಇದನ್ನು 8 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. ವಿಪತ್ತು ನಿರ್ವಹಣೆಗೆ ಸಜ್ಜಾಗಲು ಪ್ರತಿ ಜಿಲ್ಲೆಯಲ್ಲಿ ರೋವರ್ಸ್ ಮತ್ತು ರೇಂಜರ್ಸ್ ನ ತರಬೇತಿ ಪಡೆದ 3ರಿಂದ 4 ಸಾವಿರ ಮಂದಿಯನ್ನು ಸೇನೆ, ಪೊಲೀಸ್ ಅವರೊಂದಿಗೆ ಕಾರ್ಯ ನಿರ್ವಹಿಸಲು ಅಣಿಗೊಳಿಸಲಾಗುತ್ತಿದೆ.
ಸರ್ವ ಧರ್ಮಗಳನ್ನೂ ಗೌರವವಾಗಿ ಕಾಣುವ ಶಿಸ್ತನ್ನು ರೂಪಿಸುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಶಾಲಾ ಕಾಲೇಜುಗಳಲ್ಲಿ ತರಬೇತಿ ಕಡ್ಡಾಯಗೊಳಿಸುವಂತೆ ಕೋರಲಾಗಿದೆ. ಕಾಲೇಜುಗಳಲ್ಲಿ ರೋವರ್ಸ್ ಮತ್ತು ರೇಂಜರ್ಸ್‌ನ ತರಬೇತಿ ಪಡೆದವರಿಗೆ ವಿವಿಧ ಅವಕಾಶಗಳನ್ನು ನೀಡಲಾಗುತ್ತಿದೆ. ವೃತ್ತಿಪರ ಶಿಕ್ಷಣದಲ್ಲಿ ಹೆಚ್ಚಿನ ಸೀಟುಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪಡೆದವರಿಗೆ ಹೆಚ್ಚಿನ ಸೀಟುಗಳನ್ನು ಮೀಸಲಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….