ದೊಡ್ಡಬಳ್ಳಾಪುರ, (ಜೂ.27): ಒಕ್ಕಲಿಗ ಸಮುದಾಯದ ಮುಖಂಡರನ್ನು ಕಡೆಗಣಿಸಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ನಡೆಸುತ್ತಿರುವ ಬೆಳವಣಿಗೆ ತಾಲೂಕಿನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಕೆಂಪೇಗೌಡರ ಜಯಂತೋತ್ಸವ ಸಮಿತಿ, ತಾಲೂಕು ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮ ಇಂದು ನಗರದ ಒಕ್ಕಲಿಗರ ಭವನದಲ್ಲಿ ನಡೆಯುತ್ತಿದೆ.
ಆದರೆ ಕಾರ್ಯಕ್ರಮದ ಆಯೋಜನೆ ಕುರಿತಂತೆ ಸಮುದಾಯ ಮುಖಂಡರನ್ನು ಪರಿಗಣಿಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆಂಬುದು ಒಕ್ಕಲಿಗ ಸಮುದಾಯದ ಮುಖಂಡರ ಬೇಸರಕ್ಕೆ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ನಗರದ ತಾಲೂಕು ಕಚೇರಿ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸುವ ಮೂಲಕ ಪ್ರತ್ಯೇಕವಾಗಿ ಕೆಂಪೇಗೌಡರ ಜಯಂತಿ ಆಚರಿಸಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಕೆಂಪೇಗೌಡರ ಜಯಂತೋತ್ಸವ ಸಮಿತಿಗೆ ಪ್ರತಿಭಟನೆಯ ಬಿಸಿ ತೋರಿಸಿದ್ದಾರೆ.
ಈ ವೇಳೆ ಮಾತನಾಡಿದ ತಾಲೂಕುಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣ ಗೌಡ ಹಾಗೂ ಒಕ್ಕಲಿಗ ಸಮುದಾಯದ ಯುವ ಮುಖಂಡ ವಿಶ್ವಾಸ್ ಹನುಮಂತೇಗೌಡ, ತಾಲೂಕಿನಲ್ಲಿ ಹಲವು ವರ್ಷಗಳಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕಾರ್ಯಕ್ರಮದ ಆಯೋಜನೆ ಕುರಿತಂತೆ ಸಮುದಾಯ ಮುಖಂಡರ ಸಭೆ ನಡೆಸಿ ಸಂಭ್ರಮದಿಂದ ಆಚರಿಸಿಕೊಂಡು ಬಂದಿರುವುದು ಸಾಕ್ಷಿಯಾಗಿದೆ. ಆದರೆ ಈ ವರ್ಷದ ಆಚರಣೆಯಲ್ಲಿ ಬೇಕಾಬಿಟ್ಟಿ ಸಭೆ ನಡೆಸಿ ಏಕಪಕ್ಷೀಯ ನಿರ್ಣಯ ಕೈಗೊಂಡು ಒಕ್ಕಲಿಗ ಸಮುದಾಯವನ್ನು ಕಡೆಗಣಿಸಿರುವುದು ಖಂಡನೀಯ.
ಕಳೆದ 10 ವರ್ಷ ಅಧಿಕಾರದಲ್ಲಿದ್ದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಕಳೆದ ನಾಲ್ಕು ಚುನಾವಣೆಯಲ್ಲಿ ಕೇತ್ರದ ಜನರ ಸೇವೆ ಸಲ್ಲಿಸಿರುವ ಮುನೇಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಅನೇಕ ನಾಯಕರನ್ನು ಕಡೆಗಣಿಸಿ ಕಾರ್ಯಕ್ರಮ ನಡೆಸುತ್ತಿರುವುದು ವಿಪರ್ಯಾಸ. ಮಹಾನಾಯಕರ ಜನ್ಮದಿನಾಚರಣೆ ಆಚರಣೆ ವೇಳೆ ಎಂದೂ ಈ ರೀತಿಯಾದ ಏಕಪಕ್ಷೀಯ ನಿಲುವು ತಾಲೂಕಿನಲ್ಲಿ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನಗರಸಭಾ ಸದಸ್ಯರಾದ ರಜನಿ ಸುಬ್ರಮಣಿ, ಹೆಚ್.ಎಸ್.ಶಿವಶಂಕರ್, ಸುಬ್ಬು, ನಗರಸಭೆ ಮಾಜಿ ಸದಸ್ಯರಾದ ಶಿವಿ, ಶಿವಕುಮಾರ್(ಬಸ್), ಮುಖಂಡರಾದ ಅಪ್ಪಿ ವೆಂಕಟೇಶ್, ರಾಜಣ್ಣ ಬಿ.ಕೆ, ನಾಗರಾಜು(ಮಾಸ್ಟರ್), ತಳಗವಾರ ಪುನೀತ್, ರಾಜಘಟ್ಟ ರವಿ, ಹಣಬೆ ಪಂಚಾಯತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಗೌಡ, ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….