ದೊಡ್ಡಬಳ್ಳಾಪುರ, (ಜೂ.27): ದೊಡ್ಡಬಳ್ಳಾಪುರದಲ್ಲಿ ಪುತ್ಥಳಿ ನಿರ್ಮಾಣ ಮಾಡುವ ಪ್ರಸ್ತಾವನೆ ಬಂದಿದ್ದು, ಒಕ್ಕಲಿಗರ ಸಂಘದಿಂದ ಇದಕ್ಕೆ ಸ್ಥಳ ನೀಡಿ ಅಗತ್ಯ ಸಹಕಾರ ನೀಡಲಾಗುವುದು ಎಂದು ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವಿ.ಕೃಷ್ಣಪ್ಪ ಹೇಳಿದರು.
ಕೆಂಪೇಗೌಡ ಜಯಂತ್ಯುತ್ಸವ ಆಚರಣ ಸಮಿತಿ ವತಿಯಿಂದ ನಗರದ ಒಕ್ಕಲಿಗರ ಸಮುದಯ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡರು ಬೆಂಗಳೂರಿನಲ್ಲಿ ಕೋಟೆ ಕೊಟ್ಟಲೆಗಳು, ಕೆಂಪಾಂಬುದಿ ಕೆರೆ, ಗವಿ ಗಂಗಾಧರೇಶ್ವರಸ್ವಾಮಿ ದೇವಾಲಯ, ದೊಡ್ಡಗಣಪತಿ ದೇವಾಲಯ, ನಾಲ್ಕು ಕಡೆಯಲ್ಲಿ ಗೋಪುರ ಕಟ್ಟಿಸುವುದು ಮೊದಲಾದ ಅನೇಕ ಪ್ರಗತಿ ಕಾರ್ಯಗಳನ್ನು ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಪಾಳೇಗಾರರಾಗಿ ಉತ್ತಮ ಆಡಳಿತ ನೀಡುವ ಮೂಲಕ ಇಂದಿಗೂ ಜನರ ಮನಸ್ಸಿನಲ್ಲಿ ನಿಂತಿದ್ದಾರೆ. ಇಂತಹ ಮಹನೀಯರು ನಮಗೆ ಪ್ರೇರಣೆಯಾಗಬೇಕಿದೆ.
ಕ್ಷೇತ್ರದ ಶಾಸಕರು ತಮ್ಮ 5 ವರ್ಷಗಳ ಅವಧಿಯಲ್ಲಿ ಎಷ್ಟು ಕೆಲಸ ಮಾಡಿದ್ದಾರೆ. ಇದರಲ್ಲಿ ಶಾಶ್ವತ ಕೆಲಸ ಯಾವುದು ಎನ್ನುವ ಮನನ ಮಾಡಿಕೊಳ್ಳಬೇಕಿದೆ ಎಂದರು.
ಕೆಂಪೇಗೌಡ ಜಯಂತ್ಯುತ್ಸವ ಆಚರಣೆ ಸಮಿತಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ ಮಾತನಾಡಿ, ಕೆಂಪೇಗೌಡರ ಜಯಂತಿಗೆ ಸಮುದಾಯದ ಭಾಗವಹಿಸುವಿಕೆ ಕಡಿಮೆಯಾಗಿರುವುದು ಖೇದಕರ. ಪೂರ್ವಭಾವಿ ಸಭೆ ಮೊದಲುಗೊಂಡು ಎಲ್ಲಾ ಸಭೆಗಳಿಗೂ ಸಮುದಾಯದ ಮುಖಂಡರನ್ನು ಆಹ್ವಾನಿಸಲಾಗಿತ್ತು. ಆದರೆ ಮುಖಂಡರು ಬರದೇ, ವಿನಾಕಾರಣ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ.
ಮಾಜಿ ಶಾಸಕ ವೆಂಕಟರಮಣಯ್ಯ ಅವರನ್ನು ನಾನೇ ಖುದ್ದು ಆಹ್ವಾನಿಸಿದ್ದೆ ಆದರೆ ಬರಲಿಲ್ಲ. ಕಾರ್ಯಕ್ರಮ ಆಚರಣೆ ಕುರಿತಾಗಿ ಎದ್ದಿರುವ ಅಪಸ್ವರಗಳ ಬಗ್ಗೆ ನೋವಾಗಿದ್ದು, ಇನ್ನು ಮುಂದೆ ಈ ಕಾರ್ಯಕ್ರಮದ ಉಸ್ತುವಾರಿ ಬೇರೆಯವರು ವಹಿಸಿಕೊಳ್ಳಲಿ, ನಾನು ಅಲ್ಲಿ ಯಾವುದೇ ಕೆಲಸ ಮಾಡಲು ಸಿದ್ದ ಎಂದರು.
ಸಮಾರಂಭದಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶಾಸಕ ಧೀರಜ್ ಮುನಿರಾಜು, ಕರ್ನಾಟಕ ರಾಜ್ಯ ತೆಂಗಿನ ನಾರು ಸಹಕಾರ ಮಂಡಲಿ ಅಧ್ಯಕ್ಷ ವೆಂಕಟೇಶ್‍ಬಾಬು, ಕೃಷಿ ವಿವಿ ಸೆನಟ್ ಸದಸ್ಯ ಅರವಿಂದ್, ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್, ಪದ್ಮನಾಭ್, ಮುಖಂಡರಾದ ಎ.ನರಸಿಂಹಯ್ಯ, ಬಿ.ಸಿ.ವೆಂಕಟೇಶ್, ಬಿ.ಸಿ.ನಾರಾಯಣಸ್ವಾಮಿ, ತಿ.ರಂಗರಾಜು, ಅಪ್ಪಯ್ಯಣ್ಣ, ಚಂದ್ರಪ್ಪ, ನಾಗೇಶ್, ಚುಂಚೇಗೌಡ, ನಾರಾಯಣಸ್ವಾಮಿ, ಪ್ರಸನ್ನ ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಮೆರವಣಿಗೆ: ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ನಗರದ ನೆಲದಾಂಜನೇಯಸ್ವಾಮಿ ದೇವಾಲಯದಿಂದ ವೇದಿಕೆಯವರೆಗೆ ಕೆಂಪೇಗೌಡರ ಭಾವಚಿತ್ರ ಹಾಗೂ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಗೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು.
ತಹಶೀಲ್ದಾರ್ ಮೋಹನ ಕುಮಾರಿ, ಕೆಂಪೇಗೌಡ ಜಯಂತ್ಯೋತ್ಸವ ಆಚರಣ ಸಮಿತಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್ ಮೊದಲಾದವರು ಭಾಗವಹಿಸಿದ್ದರು.
ವಿವಿಧ ಜನಪದ ಕಲಾ ತಂಡದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಂಚರಿಸಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….