ಅನೇಕ ಕೌರವರು ಹಾಗೂ ಶೂರ ಯೋಧರು ಯುದ್ಧದಲ್ಲಿ ಪಾಂಡವರ ಕೈಯಲ್ಲಿ ಮಡಿಯುವುದು, ಇದರಿಂದ ಸಂತಪ್ತ ದುರ್ಯೋಧನನು ಭೀಷ್ಮಾಚಾರ್ಯರಿಗೆ ಈ ಬಗ್ಗೆ ಪ್ರಶ್ನಿಸುವುದು. ಮಹಾಭಾರತದ ಮೊದಲ ಮೂರು ದಿನಗಳಲ್ಲಿ ದುರ್ಯೋಧನನ ಸಾಕಷ್ಟು ಕೌರವಬಂಧುಗಳು ಹಾಗೂ ಕೌರವರ ಪಕ್ಷದಲ್ಲಿ ಹೋರಾಡಿದ ಇತರ ಶೂರ ಯೋಧರು ಪಾಂಡವರಿಂದ ಹತರಾದರು.
ಪಂಚಪಾಂಡವರು ಹಾಗೂ ಅವರ ಪಕ್ಷದ ಪ್ರಮುಖ ಯೋಧರ ಪೈಕಿ ಯಾರೂ ಹತರಾಗಿರಲಿಲ್ಲ; ಆದುದರಿಂದ ಸಂತಪ್ತಗೊಂಡ ದುರ್ಯೋಧನನು ಕೌರವರ ಸೇನಾಪತಿಯಾದ ಭೀಷ್ಮಾಚಾರ್ಯರನ್ನು ಈ ಬಗ್ಗೆ ಪ್ರಶ್ನಿಸಿದಾಗ ಭೀಷ್ಮಾಚಾರ್ಯರು ‘ನಾಳೆ ನಾನು 5 ಬಾಣಗಳಿಂದ ಐದೂ ಪಾಂಡವರನ್ನು ಕೊಲ್ಲುವೆನು’ ಎಂಬ ಪ್ರತಿಜ್ಞೆಯನ್ನು ಮಾಡಿದರು. ಆಗ ದುರ್ಯೋಧನನು ‘ಯಾವ ಐದು ಬಾಣಗಳಿಂದ ಪಾಂಡವರನ್ನು ಕೊಲ್ಲುವವರಿದ್ದರೋ, ಆ ಬಾಣಗಳನ್ನು ಮಂತ್ರಿಸಿ ನನ್ನ ವಶಕ್ಕೆ ನೀಡಿ, ನಾನು ಆ ಬಾಣಗಳನ್ನು ನಾಳೆ ಬೆಳಿಗ್ಗೆ ಯುದ್ಧಕ್ಕೆ ಹೊರಡುವ ಮುನ್ನ ನಿಮಗೆ ತಂದು ಕೊಡುವೆನು’ ಎಂದು ಹೇಳಿದನು.
ಭೀಷ್ಮಾಚಾರ್ಯರು 5 ಬಾಣಗಳನ್ನು ಮಂತ್ರಿಸಿ ದುರ್ಯೋಧನನಿಗೆ ಕೊಟ್ಟರು. ದುರ್ಯೋಧನನು ಆ ಬಾಣಗಳನ್ನು ಪಡೆದು ತನ್ನ ಶಿಬಿರಕ್ಕೆ ಮರಳಿ ಬಂದನು.
ಶ್ರೀಕೃಷ್ಣನು ಅರ್ಜುನನಿಗೆ ದುರ್ಯೋಧನನ ಬಳಿ ಹೋಗಿ ಐದು ಬಾಣಗಳನ್ನು ಕೇಳಲು ಹೇಳುವುದು, ಶ್ರೀಕೃಷ್ಣನಿಗೆ ಈ ವಿಷಯ ತಿಳಿಯಿತು. ಅವನಿಗೆ ಅದರ ಉಪಾಯವೂ ಹೊಳೆಯಿತು.
ಪಾಂಡವರ ವನವಾಸದ ಸಮಯದಲ್ಲಿ ಒಮ್ಮೆ ದುರ್ಯೋಧನನು ವನವಿಹಾರಕ್ಕೆ ತೆರಳಿದ್ದಾಗ ಅರ್ಜುನನು ಅವನ ಪ್ರಾಣವನ್ನು ರಕ್ಷಿಸಿದ್ದನು. ಆದುದರಿಂದ ದುರ್ಯೋಧನನು ಅರ್ಜುನನಿಗೆ ಯಾವುದೇ ವರ ಬೇಡಲು ಹೇಳಿದಾಗ ಅರ್ಜುನನು ಅವನಿಗೆ ‘ಈಗ ಬೇಡ, ಅವಶ್ಯಕತೆಯಿದ್ದಾಗ ನಾನು ನಿನ್ನ ಬಳಿ ವರ ಕೇಳುವೆನು, ಆಗ ಬೇಡಿದ್ದನ್ನು ಕೊಡಬೇಕು’ ಎಂದು ಹೇಳಿದ್ದನು.
ಶ್ರೀಕೃಷ್ಣನು ಅರ್ಜುನನ ಹತ್ತಿರ ಹೋಗಿ ‘ತಕ್ಷಣ ಹೋಗಿ ದುರ್ಯೋಧನನಿಂದ ಆ ಐದು ಬಾಣಗಳನ್ನು ಬೇಡಲು’ ಹೇಳಿದನು. ಅರ್ಜುನನು ದುರ್ಯೋಧನನ ಬಳಿ ಹೋದನು ಹಾಗೂ ಭೀಷ್ಮಾಚಾರ್ಯರು ಮಂತ್ರಿಸಿ ಕೊಟ್ಟ ಐದು ಬಾಣಗಳನ್ನು ಬೇಡಿದನು. ಅರ್ಜುನನಿಗೆ ವರ ನೀಡಿದ್ದರಿಂದ ದುರ್ಯೋಧನನಿಗೆ ಅನಿವಾರ್ಯವಾಗಿ ಆ ಬಾಣಗಳನ್ನು ಕೊಡಬೇಕಾಯಿತು.
ಶ್ರೀಕೃಷ್ಣನು ಪಾಂಡವರ ಪ್ರಾಣ ಉಳಿಸಿದನು. ದುರ್ಯೋಧನನೂ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆ ಐದು ಬಾಣಗಳನ್ನು ಅರ್ಜುನನಿಗೆ ಕೊಟ್ಟನು. ಆದುದರಿಂದಲೇ ಮಹಾಭಾರತವನ್ನು ‘ಧರ್ಮಯುದ್ಧ’ವೆಂದು ಹೇಳುತ್ತಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….