ದೊಡ್ಡಬಳ್ಳಾಪುರ, (ಜೂ.28): ಸರ್ಕಾರಿ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ದೊರಕುತ್ತಿರುವ ಹಿನ್ನೆಲೆಯಲ್ಲಿ, ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬಂದಿರುವ ಅನೇಕ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ರಂಗಪ್ಪ ತಿಳಿಸಿದರು.
ತಾಲೂಕಿನ ಸಾಸಲು, ತೋಡಲಬಂಡೆ, ದೊಡ್ಡಗುಂಡಪ್ಪ ನಾಯಕನಹಳ್ಳಿ, ಆರೂಢಿ ಮುಂತಾದ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಶಿಕ್ಷಕರ ಸಭೆ ನಡೆಸಿದರು.
ಈ ವೇಳೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಮೇಲೆ ಹೆಚ್ಚಿನ ಹೊಣೆಗಾರಿಕೆಯಿದ್ದು, ಬೇಕಬಿಟ್ಟಿ ವರ್ತನೆ ಕಂಡು ಬಂದಲ್ಲಿ ವೇತನ ತಡೆಹಿಡಿಯಲಾವುದು ಎಂದು ಎಚ್ಚರಿಕೆ ನೀಡಿದರು.
ಮಕ್ಕಳಲ್ಲಿ ಶಿಸ್ತನ್ನು ಮೈಗೂಡಿಸುವ ಕುರಿತು ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕಿದೆ. ಆಯಾ ಸಮಯಕ್ಕೆ ಪಾಠ ಪ್ರವಚನ ಮುಗಿಸಿ, ಟೆಸ್ಟ್ ನೀಡಬೇಕಿದೆ. ಕೋವಿಡ್ ನಂತರ ಮಕ್ಕಳಲ್ಲಿ ರೈಟಿಂಗ್ ಸ್ಕಿಲ್ ಕಡಿಮೆಯಾಗಿದ್ದು, ರೈಟಿಂಗ್ ಸ್ಕಿಲ್ ಹೆಚ್ಚಿಲು ಆಯಾ ದಿನದ ಪಠ್ಯಕ್ಕೆ ಸಂಬಂದಿಸಿದಂತೆ ಹೆಚ್ಚು ಹೆಚ್ಚು ಹೋಂ ವರ್ಕ್ ನೀಡಬೇಕಿದೆ. ಮರುದಿನ ಹೋಂ ವರ್ಕ್ ಪರಿಶೀಲನೆ ಮಾಡಿ, ತಪ್ಪಿದ್ದರೆ ಸಲಹೆ ನೀಡಬೇಕು. ಅನೇಕ ಶಿಕ್ಷಕರು ಹೋಂ ವರ್ಕ್ ಪುಸ್ತಕವನ್ನು ಬೇಜವಾಬ್ದಾರಿಯಿಂದ ಪರಿಶೀಲನೆ ಮಾಡಿರುವ ಆರೋಪ ಕೇಳಿಬಂದಿದ್ದು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.
ಉಳಿದಂತೆ ಶಾಲೆಯ ಮುಖ್ಯಶಿಕ್ಷಕರಿಗೆ ಶಿಕ್ಷಕರ, ಮಕ್ಕಳ ಚಲನವಲದ ಕುರಿತು ಸಂಪೂರ್ಣ ಅರಿವಿರಬೇಕು. ಮಕ್ಕಳ ಕಲಿಕಾ ವಿಚಾರಗಳು, ತರಗತಿಯಲ್ಲಿ ಏನು ನಡೆಯುತ್ತಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ಇಟ್ಟುಕೊಳ್ಳಬೇಕು. ಕೇವಲ ಶಾಲೆಯ ಕೆಲಸಗಳಿಗೆ ಸೀಮಿತವಾಗದೆ ಮಕ್ಕಳಿಗೆ ಪಾಠ ಮಾಡಬೇಕು.
ಊಟದ ವಿತರಣೆ, ಸ್ವಚ್ಚತೆ ಕಾಪಾಡುವುದು, ತ್ವರಿತವಾಗಿ ಊಟ ವಿತರಿಸುವುದು. ಊಟದ ಅವಧಿ 40ನಿಮಿಷದ ಒಳಗಾಗಿ ಮುಗಿಸಬೇಕಿದ್ದು, ವಿಳಂಬ ಧೋರಣೆ ತೋರಿ ಶೈಕ್ಷಣಿಕ ಅವಧಿಯನ್ನು ಕಡಿತವಾಗುವಂತೆ ಮಾಡಿದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ.
ಸರ್ಕಾರಿ ಶಾಲೆಗಳ ಕುರಿತು ಖಾಸಗಿ ಶಾಲೆ ಪೋಷಕರಿಗೆ ಆಸಕ್ತಿ ಹೆಚ್ಚಿಸುವಂತೆ ಶಿಕ್ಷಕರು ಕಾರ್ಯನಿರ್ವಹಿಸಬೇಕಿದೆ. ಮಕ್ಕಳ ಸಮಸ್ಯೆ ಹೇಳುತ್ತಾ ಕೂತರೆ ಶಿಕ್ಷಕ ಸರಿ ಇಲ್ಲ ಎಂಬುದೇ ಅರ್ಥ. ನೀವು ಸರಿಯಾಗಿ ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಸ್ಯೆ ಹೇಳಿಕೊಳ್ಳುವ ಅಗತ್ಯತೆ ಉಂಟಾಗುವುದಿಲ್ಲ.
ತಾಲೂಕಿನಲ್ಲಿ ಸರ್ಕಾರ, ಖಾಸಗಿ, ಪ್ರಜ್ಞಾವಂತ ಪೋಷಕರಿಂದ ಸರ್ಕಾರಿ ಶಾಲೆಗಳಿಗೆ ಮತ್ತೆ ಜೀವ ಬಂದಿದೆ. ಅದನ್ನು ಉಳಿಸಿಕೊಳ್ಳಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೆಚ್ಚಿನ ಶ್ರಮವಹಿಸಬೇಕೆಂದರು.
ಈ ಸಂದರ್ಭದಲ್ಲಿ ಇಸಿಒ ಮೈಲಾರಪ್ಪ, ಸೇರಿದಂತೆ ಆಯಾ ಶಾಲೆಯ ಮುಖ್ಯ ಶಿಕ್ಷಕರು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….