ದೊಡ್ಡಬಳ್ಳಾಪುರ, (ಜೂ.28): ಜೂನ್ 29ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲು ಎಲ್ಲಾ ಸಮುದಾಯದವರ ಸಹಕಾರ ಅಗತ್ಯವಿದೆ. ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಸಂತೋಷದಿಂದ ಆಚರಣೆ ಮಾಡಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ನಗರದ ಬಸವ ಭವನದಲ್ಲಿ ಬುಧವಾರ ಪೊಲೀಸ್ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಆಯೋಜಿಸಿದ್ದ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಧರ್ಮದ ಆಚರಣೆ ಮಾಡುತ್ತಿರುವಾಗ ಅನ್ಯ ಧರ್ಮದವರು ತಾತ್ಸಾರ ಮಾಡಬಾರದು. ಪ್ರತಿಯೊಂದು ಧರ್ಮವೂ ಶಾಂತಿ, ಸಹಭಾಳ್ವೆ ಹಾಗೂ ಸೌಹಾರ್ದತೆಯನ್ನು ಸಾರುತ್ತವೆ. ಅವರವರ ಧರ್ಮ ಅವರಿಗೇ ಶ್ರೇಷ್ಠ. ಅವರ ಆಚರಣೆಗಳಿಗೆ ಯಾರೂ ಕೂಡ ದಕ್ಕೆ ತರಬಾರದು. ಆಯಾ ಧರ್ಮದ ಧಾರ್ಮಿಕ ಹಬ್ಬಗಳ ಆಚರಣೆ ವೇಳೆ ಅನ್ಯಧರ್ಮಿಯರು ಸಹಕರಿಸಬೇಕು. ಶಾಂತಿ ಭಂಗ ಉಂಟು ಮಾಡುವ ಹೇಳಿಕೆ, ಧರ್ಮಧರ್ಮಗಳ ವಿರುದ್ಧ ಎತ್ತಕಟ್ಟುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು. ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಜೊತೆಗೆ ಶಾಂತಿ ಭಂಗ ಮಾಡದಂತೆ ಎಚ್ಚರಿಕೆ ಸಹ ನೀಡಲಾಗಿದೆ. ಕಾನೂನು ಉಲ್ಲಂಘಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.
ಬಿಗಿ ಭದ್ರತೆ: ಸಮಾಜದ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಎರಡು ಕೆಎಸ್ಆರ್ ಪಿ ತುಕಡಿ, 200 ಮಂದಿ ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ ಎಲ್.ಪುರುಷೋತ್ತಮ್ ಮಾತನಾಡಿ, ಪೊಲೀಸರು ಕರ್ತವ್ಯದ್ದಲ್ಲಿದ್ದಾಗ ಯಾವುದೇ ಧರ್ಮಕ್ಕೆ ಸೇರಿದವರಾಗಿರುವುದಿಲ್ಲ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರ ಸಹಕಾರ ಅಗತ್ಯವಾಗಿದೆ. ಮುಸ್ಲಿಂ ಬಾಂಧವರು ತಮ್ಮ ಆಚರಣೆಯನ್ನು ಶಾಂತಿ ಸುವ್ಯವಸ್ಥೆಯಿಂದ ಮಾಡುವುದರೊಂದಿಗೆ ಸ್ವಚ್ಛತೆಗೂ ಆದ್ಯತೆ ನೀಡಿ ಎಂದರು.
ಸಭೆಯಲ್ಲಿ ಡಿವೈಎಸ್ಪಿ ನಾಗರಾಜ್ ಸೇರಿಂದತೆ ವಿವಿಧ ತಾಲೂಕುಗಳ ಪೊಲೀಸ್ ಇನ್ಸ್‌ಪೆಕ್ಟರ್ ಗಳು, ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….