ಬೆಂಗಳೂರು, (ಜೂ.29): ಕರ್ನಾಟಕ ರಾಜ್ಯ ನೇಕಾರರ ಸಂಘಟನೆಗಳ ಒಕ್ಕೂಟದ ಮುಖಂಡರು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರ ನೇತೃತ್ವದಲ್ಲಿ ಜವಳಿ, ಕಬ್ಬು ಮತ್ತು ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ ಅವರನ್ನು ಭೇಟಿ ಮಾಡಿ ನೇಕಾರರ ಸಮಸ್ಯೆಗಳ ಬಗ್ಗೆ ವಿವರಿಸಿ, ಹಲವು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ನೂತನ ಸಚಿವ ಶಿವಾನಂದ ಎಸ್ ಪಾಟೀಲ್ ಅವರಿಗೆ ನೇಕಾರರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಪಿ.ಎ.ವೆಂಕಟೇಶ್ ರಾಜ್ಯ ನೇಕಾರರ ಸಮಸ್ಯೆಗಳ ಕುರಿತು 14 ಬೇಡಿಕೆಗಳ ಕುರಿತು ವಿವರಿಸಿದರು.
ಮುಖ್ಯವಾಗಿ ವಿದ್ಯುತ್ ಬೆಲೆ ಏರಿಕೆ ನೇಕಾರರಿಗೆ ದುಬಾರಿಯಾಗಿದ್ದು ತಕ್ಷಣ ಹಿಂಪಡೆಯಬೇಕು ಹಾಗೂ ನೇಕಾರರ ಮಗ್ಗಗಳಿಗೆ 20 ಎಚ್‌ಪಿ ವರೆಗಿನ ವಿದ್ಯುತ್ತು ಉಚಿತವಾಗಿ ನೀಡಬೇಕು, ಕರ್ನಾಟಕ ರಾಜ್ಯ ನೇಕಾರರ ಹಿತ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ನೇಕಾರರಿಗೆ ಗುರುತಿನ ಚೀಟಿಯನ್ನು ನೀಡಲು ದೊಡ್ಡಬಳ್ಳಾಪುರದಲ್ಲಿ ಬೃಹತ್ ಹೋರಾಟ ನಡೆಸಿ ಒತ್ತಾಯಿಸಲಾಗಿತ್ತು. ಹೋರಾಟದ ಫಲವಾಗಿ ಈಗ ರಾಜ್ಯದಲ್ಲಿ ಸೆನ್ಸಸ್ ಕಾರ್ಯ ಮುಗಿದಿದ್ದು, ಇಡೀ ರಾಜ್ಯದ ನೇಕಾರರಿಗೆ ತಕ್ಷಣ ನೇಕಾರ ಗುರುತಿನ ಚೀಟಿಯನ್ನು ನೀಡಬೇಕು.
ನೇಕಾರರ ಕಲ್ಯಾಣ ಮಂಡಳಿಯನ್ನು ರಚಿಸಿ ರಾಜ್ಯದ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ರೀತಿಯಲ್ಲಿ ಇ ಎಸ್ ಐ ಸೇರಿದಂತೆ 20 ಸೌಲಭ್ಯಗಳನ್ನು ನೇಕಾರರಿಗೂ ನೀಡಬೇಕು ಮತ್ತು ಈ ಕಲ್ಯಾಣ ಮಂಡಳಿಗೆ ಒಂದು ಸಾವಿರ ಕೋಟಿಯ ಆವರ್ತನಿದಿಯನ್ನು ಮೀಸಲಿಡಬೇಕು.
ನೇಕಾರರು ಸ್ವಯಂ ಉದ್ಯೋಗಕ್ಕೆ ಖರೀದಿಸುವ ಮಗ್ಗಗಳಿಗೆ ಮತ್ತು ಜಾಕಾರ್ಡುಗಳಿಗೆ ಶೇಕಡಾ 75 ಸಹಾಯ ದನ ನೀಡಬೇಕು. ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರು ನೇಕಾರರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಮನವಿಮಾಡಿದರು.
ಈ ಕುರಿತಂತೆ ಸಚಿವ ಶಿವಾನಂದ ಪಾಟೀಲ್ ಅವರು ಮಾತನಾಡಿ, ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತಕ್ಷಣಕ್ಕೆ ಮಾಡಬಹುದಾದ ಮತ್ತು ದೀರ್ಘಾವಧಿಯಲ್ಲಿ ಮಾಡಬಹುದಾದ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಸಾಧ್ಯವಾದಷ್ಟು ಬೇಗ ಅನುಷ್ಠಾನಕ್ಕೆ ಬರುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ ಶೀಘ್ರದಲ್ಲಿ ಮುಖ್ಯಮಂತ್ರಿಗಳ ಜೊತೆ ರಾಜ್ಯ ನೇಕಾರರ ಸಂಘಟನೆಗಳ ಮುಖಂಡರನ್ನೊಳಗೊಂಡ ಸಭೆಯನ್ನು ನಡೆಸಲು ಪ್ರಯತ್ನಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರೇವಣ್ಣ, ನೇಕಾರ ಸಮುದಾಯಗಳ ಮುಖಂಡರಾದ ಗೋವಿಂದಪ್ಪ, ಆರ್.ಎಸ್.ಶ್ರೀನಿವಾಸ್, ಸಿ.ಸುರೇಶ್, ವೇಣು, ಕೆರಮಲ ಬದ್ರಿ, ಎಂ.ಮುನಿರಾಜು, ಎಂ.ಚೌಡಯ್ಯ, ಸಿ.ಅಶ್ವತ್, ಜನಪರ ಮಂಜು, ನಾಗೇಶ್, ಎಲ್.ಶಿವಕುಮಾರ್, ರಾಜಶೇಖರ್, ಆನಂದ್, ತ್ಯಾಗರಾಜ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….