ದೊಡ್ಡಬಳ್ಳಾಪುರ, (ಜೂ.30): ತಾಲೂಕಿನ ತೂಬಗೆರೆಯಲ್ಲಿ ಏಕಾದಶಿ ಹಬ್ಬದ ಅಂಗವಾಗಿ ಜಾನಪದ ಆಚರಣೆಗಳಲ್ಲಿ ವಿಶಿಷ್ಠವಾದ ಭೂತ ನೆರೆಗೆ ಆಚರಣೆ ಶುಕ್ರವಾರ ಸಂಜೆ ಸಂಭ್ರಮದಿಂದ ನೆರವೇರಿತು.
ಹುಟ್ಟಲು ಗೋಪುರದ ಬಳಿಯ ಕಂಬದ ಆಂಜನೇಯ ದೇವಾಲಯದಿಂದ ತಮಟೆ ವಾದ್ಯಗಳೊಂದಿಗೆ ಆರಂಭವಾದ ಭೂತನೆರಿಗೆ ಊರಿನ ವಿವಿದೆಡೆ ಸಂಚರಿಸಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಯಿತು.
ಕೆಂಚಣ್ಣ ವೇಷಾಧಾರಿಯಾಗಿ ಶೇಖರ್ ಧರಿಸಿದ್ದರೆ, ಕರಿಯಣ್ಣ ವೇಷಾಧಾರಣೆಯನ್ನು ತೇರಿನಬೀದಿಯ ರಂಗಪ್ಪ ಧರಿಸಿದ್ದರು. ಕೆಂಚಣ್ಣ ಕರಿಯಣ್ಣ ಭೂತ ವೇಷಾಧಾರಿಗಳು ನರಸಿಂಹಸ್ವಾಮಿ ದೇವಾಲಯದಿಂದ ಆರಂಭಗೊಂಡು ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿ, ಧೂಪ ಹಾಕಿಸಿಕೊಂಡು ಮಂತ್ರ ಪಠಣೆಯಿಂದ ಕೆರಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಭೂತಗಳ ಆರ್ಭಟಕ್ಕೆ ಸಹಸ್ರಾರು ಜನ ಸಾಕ್ಷಿಯಾದರು.
ಕೋಪಗೊಳ್ಳುವ ಕೆಂಚಣ್ಣ ಕರಿಯಣ್ಣ ಹಾಗೂ ನರಸಿಂಹಸ್ವಾಮಿ (ಭೂತಗಳ ವೇಷಧಾರಿಗಳು) ಭೂತಗಳು ಕೈಯಲ್ಲಿ ಭೂತದ ಗುರಾಣಿ ಹಿಡಿದು, ದೇವಾಲಯದ ಮುಂಭಾಗದಿಂದ ನರ್ತನ ಮಾಡುತ್ತ ಕೈಯಲ್ಲಿನ ಭತ್ತವನ್ನು ಬೀಸುತ್ತ ಜನರ ಗುಂಪಿನತ್ತ ನುಗ್ಗಲು ಆರಂಭಿಸಿದವುದು.
ಕೋಪಗೊಂಡಿರುವ ಭೂತಗಳನ್ನು ಸಮಾಧಾನ ಪಡಿಸಲು ಹಲಸಿನ ಹಣ್ಣಿನಿಂದ ತಯಾರಿಸಲಾದ ರಸಾಯನವನ್ನು ಭೂತಗಳಿಗೆ ತಿನ್ನಿಸಲಾಯಿತು. ಊರಿನಲ್ಲೆಲ್ಲಾ ಅಡ್ಡಾಡಿಕೊಂಡು ಮನೆಗಳ ಬಳಿ ಬಂದು ಪೂಜೆ ಸ್ವೀಕರಿಸಿದವು.
ಸುಮಾರು 1 ಕಿ.ಮೀ ದೂರ ಅಟ್ಟಾಡಿಸಿ ಓಡಾಡಿದ ಭೂತ ವೇಷಧಾರಿಗಳು ಕೊನೆಗೂ ಶಾಂತಚಿತ್ತರಾದರು. ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….