ದೊಡ್ಡಬಳ್ಳಾಪುರ, (ಜುಲೈ.01): ಮದ್ಯವ್ಯಸನಕ್ಕೆ ದಾಸನಾಗಿದ್ದ ಮಗನ ಕಾಟ ತಾಳದೇ ತಂದೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಗೀಡಾದ ಯುವಕನನ್ನು ಆದರ್ಶ (25ವರ್ಷ) ಎಂದು ಗುರುತಿಸಲಾಗಿದ್ದು, ಮೃತನ ತಂದೆ ವಾಣಿಗರಹಳ್ಳಿ ನಿವಾಸಿ ಜಯರಾಮಯ್ಯ ಹತ್ಯೆ ಮಾಡಿದ ಆರೋಪಿಯಾಗಿದ್ದಾರೆ. ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಂಜೆ ತಾಯಿಯ ಬಳಿ ಹಣ ಕೇಳಿದ್ದಾನೆ. ಹಣ ನೀಡಲು ಒಪ್ಪದಿದ್ದಾಗ ತಾಯಿಯನ್ನೇ ಮನಬಂದಂತೆ ಥಳಿಸಿ ಹಣ ಕಿತ್ತುಕೊಂಡಿದ್ದಾನೆ. ಇದರಿಂದ ಕೋಪಗೊಂಡ ತಂದೆ ಜಯರಾಮಯ್ಯ ಮಗ ಆದರ್ಶ್ ನನ್ನು ತೀವ್ರವಾಗಿ ತಳಿಸಿದ್ದಾನೆ.
ಅಲ್ಲದೆ ಕೈಕಾಲುಗಳನ್ನು ಕಟ್ಟಿ ಹಾಕಿ ಕೆರೆ ಕೋಡಿಯ ಬಳಿ ಇರುವ ತಮ್ಮ ಹೊಲಕ್ಕೆ ತಂದು ಅಳಸಿನ ಮರದ ಕೆಳಗೆ ಬೆಂಕಿ ಇಟ್ಟು ಸುಟ್ಟಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ನಾಗರಾಜ್ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ಧಾವಿಸಿ, ಪರಿಶೀಲನೆ ನಡೆಸಿದರು.
ಈ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜಯರಾಮಯ್ಯರನ್ನು ವಶಕ್ಕೆ ಪಡೆಯಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….