ದೊಡ್ಡಬಳ್ಳಾಪುರ, (ಜುಲೈ, 01): ತಾಲೂಕಿನ ತೂಬಗೆರೆ ಹೋಬಳಿಯ ಮುಕ್ಕಡಿಘಟ್ಟ ಗ್ರಾಮದ ಸಮೀಪ ಗೋ ಶಾಲೆ ಪ್ರಾರಂಭಿಸಲು ಖಾಸಗಿ ಸಂಸ್ಥೆಗೆ 25 ಎಕರೆ ಸರ್ಕಾರಿ ಗೋಮಾಳ ಭೂಮಿಯನ್ನು ನೀಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ನವ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ಅಧ್ಯಕ್ಷ ಎಚ್.ಸಿ.ಅಂಬರೀಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್.ಉದಯಾರಾಧ್ಯ, ರಾಜ್ಯ ವಿಧಾನ ಸಭಾ ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗ ಬಿಜೆಪಿ ಸರ್ಕಾರ ಸ್ಥಳೀಯರ ಗಮನಕ್ಕೆ ಬಾರದಂತೆ ಇಲ್ಲಿನ ಮುಕ್ಕಡಿಘಟ್ಟದ ಸರ್ವೇ ನಂಬರ್ 37ರಲ್ಲಿನ ಗೋ ಮಾಳದ ಭೂಮಿಯನ್ನು ನೀಡಿರುವುದು ಖಂಡನೀಯ.
ನಮ್ಮೂರಿನ ರಾಸುಗಳು ಮೇಯಲು ಕಾಯ್ದಿರಿಸಿರುವ ಭೂಮಿಯನ್ನು ಬೆಂಗಳೂರಿನ ಖಾಸಗಿ ಸಂಸ್ಥೆಗೆ ನೀಡಿರುವ ಕ್ರಮ ಅವೈಜ್ಞಾನಿಕ ನಿರ್ಧಾರವಾಗಿದೆ. ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮುಕ್ಕಡಿಘಟ್ಟ ಗ್ರಾಮದಲ್ಲಿ 2010ರ ಗಣತಿಯಂತೆ 112 ರಾಸುಗಳು, 274 ಕುರಿಗಳು,108 ಮೇಕೆಗಳು ಇವೆ. ಈ ಎಲ್ಲಾ ರಾಸುಗಳು ಮೇಯಲು ಇದೇ ಗೋಮಾಳದ ಭೂಮಿಯನ್ನು ಅವಲಂಭಿಸಿವೆ ಎಂದರು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಹಿಂದಿನ ಸರ್ಕಾರ ಚುನಾವಣೆ ಕೆಲವೇ ದಿನಗಳು ಇರುವಂತೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿರುವ ಎಲ್ಲಾ ಆದೇಶಗಳನ್ನು ರದ್ದುಪಡಿಸುವ ಭರವಸೆಯನ್ನು ಈಗಾಗಲೇ ಕಂದಾಯ ಸಚಿವರು ನೀಡಿದ್ದಾರೆ. ನಿಮ್ಮ ಮನವಿಯನ್ನು ಕಂದಾಯ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ಉಪಾಧ್ಯಕ್ಷ ಸಿ.ಲಕ್ಷ್ಮೀಪತಿ, ಸಹ ಕಾರ್ಯದರ್ಶಿ ಜಿ.ಕನಕರಾಜು, ಮುಖಾರತ್ ಷರೀಫ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….