ದೊಡ್ಡಬಳ್ಳಾಪುರ, (ಜುಲೈ,01): ನಗರದ ಸರ್ಕಾರಿ ಸಾರ್ವಜನಿಕ ತಾಯಿ ಮಗು ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಮೇಶ್, ಕೋವಿಡ್ ಸಮಯದಲ್ಲಿ ಅನೇಕ ವೈದ್ಯರು ತಮ್ಮ ಜೀವದ ಹಂಗುತೊರೆದು ಜನರಿಗೆ ಸೇವೆ ನೀಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ವೈದ್ಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವೈದ್ಯರ ದಿನ ಇಂತಹ ನಿಸ್ವಾರ್ಥ ಸೇವೆ ಮಾಡುವ ವೈದ್ಯರನ್ನು ನೆನೆಯುವ ಅವರ ಸೇವೆಯನ್ನು ಸ್ಮರಿಸಿ ಮತ್ತಷ್ಟು ಸೇವೆ ಮಾಡಲು ಪ್ರೋತ್ಸಾಹಿಸುವ ದಿನವಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಜಂಟಿ ಕಾರ್ಯದರ್ಶಿ ಎಲ್.ಶ್ರೀನಿವಾಸ ಮೂರ್ತಿ ಮಾತನಾಡಿ, ಸರ್ಕಾರಿ ಆಸ್ಪತ್ರೆ ಉತ್ತಮ ಸೇವೆಯಿಂದಾಗಿ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಗಿದೆ. ಇದಕ್ಕೆ ಇಲ್ಲಿನ ವೈದ್ಯರ ಶ್ರಮ ಕಾರಣವಾಗಿದೆ. ಕ್ಷಯ ರೋಗಿಗಳನ್ನು ದತ್ತು ಪಡೆದು ಅವರ ರೋಗವನ್ನು ಗುಣಮುಖರಾಗಿಸುವ ಅಭಿಯಾನಕ್ಕೆ ಕೈ ಜೋಡಿಸಿರುವುದು ತೃಪ್ತಿ ತಂದಿದೆ. ದಾನಿಗಳು ಇಂತಹ ಸೇವಾ ಕಾರ್ಯ ಮತ್ತಷ್ಟು ಕೈಗೊಳ್ಳುವ ಮೂಲಕ ಕ್ಷಯ ರೋಗಿಗಳಿಗೆ ಚೈತನ್ಯ ತುಂಬಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವೈದ್ಯರ ದಿನಾಚರಣೆ ಹಿನ್ನಲೆ ಸೇವೆಯಿಂದ ನಿವೃತ್ತರಾದ ಹಿರಿಯ ವೈದ್ಯರಾದ ಡಾ. ಶಿವರಾಜ್ ಹೆಡೆ ಅವರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಲಕ್ಷ್ಯ ಪ್ರಮಾಣ ಪತ್ರ ದೊರೆಯುವಲ್ಲಿ ಶ್ರಮಿಸಿದ ಆಸ್ಪತ್ರೆ, ವೈದ್ಯರು ಸಿಬ್ಬಂದಿಗಳಿಗೆ ಸನ್ಮಾನ ಹಾಗೂ ಉಡುಗೊರೆ ನೀಡಲಾಯಿತು. ಕ್ಷಯರೋಗಿಗಳನ್ನು 6 ತಿಂಗಳು ದತ್ತು ಪಡೆದು ದಿನಸಿ ಕಿಟ್ಗ ಳನ್ನು ನೀಡಿದ ಎಲ್.ಶ್ರೀನಿವಾಸ ಮೂರ್ತಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ್, ಡಾ.ಅರುಣ್ ಕುಮಾರ್, ಡಾ.ಮಂಜುನಾಥ್, ಡಾ.ಪಲ್ಲವಿ, ಡಾ.ಗಿರೀಶ್, ಡಾ.ಶರ್ಮಿಳಾ ಹೆಡೆ, ಸೇರಿದಂತೆ ವಿವಿಧ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು.ನಿಸ್ವಾರ್ಥ ಸೇವೆಯ ವೈದ್ಯರ ಕೊಡುಗೆ ಸಮಾಜ ಸ್ಮರಿಸಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….