ದೊಡ್ಡಬಳ್ಳಾಪುರ, (ಜುಲೈ, 03): ನಗರದ ಪ್ರವಾಸಿ ಮಂದಿರ ಬಳಿಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸಂಪರ್ಕಿಸುವ ಡಾ.ಅಂಬೇಡ್ಕರ್ ವೃತ್ತದಲ್ಲಿ ಹಲವು ದಿನಗಳಿಂದ ಒಳಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ಮಂದಿರದ ಫುಟ್ಬಾತ್ ನಲ್ಲಿರುವ ಮ್ಯಾನ್ ಹೋಲ್‌ನಲ್ಲಿ ಒಳಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ನಗರಸಭೆಯ ಪೌರಕಾರ್ಮಿಕರು ಸೆಪ್ಟಿಕ್ ಟ್ಯಾಂಕಿನೊಂದಿಗೆ ಬಂದು ಸರಿಪಡಿಸಿದ್ದರು. ಆದರೆ, ಮರುದಿನದಿಂದಲೇ ಮತ್ತೆ ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿದೆ.
ಒಳಚರಂಡಿ ನೀರಿನಿಂದ ದುರ್ವಾಸನೆ ವಿಪರೀತವಾಗಿದ್ದು, ಸಿಗ್ನಲ್‌ನಲ್ಲಿ ನಿಲ್ಲುವ ವಾಹನ ಸವಾರರು, ಬಸ್ಸಿಗಾಗಿ ಕಾಯುವ ಪ್ರಯಾಣಿಕರು ದುರ್ವಾಸನೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನು ದ್ವಿಚಕ್ರ, ತ್ರಿಚಕ್ರ ಸವಾರರು ಒಳಚರಂಡಿ ನೀರಿನಲ್ಲೇ ಅಸಹ್ಯ ಪಟ್ಟುಕೊಂಡ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ವಿಪರ್ಯಾಸಕ್ಕೆ ಪ್ರವಾಸಿ ಮಂದಿರಕ್ಕೆ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಕೊಳಚೆ ನೀರು ದಾಟಿಯೇ ಬರುತ್ತಿದ್ದು ಸಮಸ್ಯೆ ಬಗೆ ಹರಿಸಲು ಗಮನ ಹರಿಸುತ್ತಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಂತೆ ಇದಾ ನವ ದೊಡ್ಡಬಳ್ಳಾಪುರ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರೆ. ಸಾಮಾಜಿಕ ಚಿಂತಕ ಕೀರ್ತಿ ಪ್ರತಿಕ್ರಿಯೆ ನೀಡಿ, ದೊಡ್ಡಬಳ್ಳಾಪುರದಲ್ಲಿ ಶಾಸಕರು ಬದಲಾದರೆ ಹೊರತು ಸಮಸ್ಯೆ ಬದಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….