ದೊಡ್ಡಬಳ್ಳಾಪುರ, (ಜುಲೈ.08): ಮಾನವ ಮತ್ತು ಪರಿಸರದ ಸಂಬಂಧ ಗಾಢವಾಗಿದ್ದು, ಇದನ್ನು ಗಟ್ಟಿಗೊಳಿಸಬೇಕಾದರೆ ಪರಿಸರದ ಸಂರಕ್ಷಣೆಯ ಕಾರ್ಯಕ್ಕೆ ಎಲ್ಲರೂ ಕಟಿಬದ್ಧರಾಗಬೇಕಿದೆ ಎಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ನಗರದ ಬೆಸೆಂಟ್ ಪಾರ್ಕ್‍ನಲ್ಲಿ ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಅವರು ಮಾತನಾಡಿದರು.
ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ಅರಣ್ಯ ವ್ಯಾಪ್ತಿ ವಿಸ್ತೀರ್ಣವಾಗುತ್ತಿಲ್ಲ. ರಾಜ್ಯದಲ್ಲಿ ಒಂದು ದಶಕದಿಂದ ವಿಸ್ತೀರ್ಣವಾಗುತ್ತಿರುವುದು ಸಮಾಧಾನಕರವಾಗಿದೆ. ರಾಜ್ಯದಲ್ಲಿನ ಅನೇಕ ನದಿಗಳಿಂದ ನಾವು ಬದುಕುತ್ತಿದ್ದು, ನದಿ ಹಾಗೂ ಜಲ ಮೂಲಗಳ ರಕ್ಷಣೆ ಮಾಡಬೇಕಿದೆ. ಸೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಸಮಯ ಪ್ರಜ್ಞೆ ಶಿಸ್ತು ಕಲಿಸುವುದರೊಂದಿಗೆ ಪರಿಸರದ ಬಗ್ಗೆ ಆಸಕ್ತಿ ಮೂಡಿಸಿ, ಪರಿಸರಕ್ಕೆ ಪೂರಕವಾದ ಕಾರ್ಯಗಳನ್ನು ಕಲಿಸಲಾಗುತ್ತದೆ ಎಂದರು.
ಕಾಲೇಜುಗಳಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕವನ್ನು ಆರಂಭಿಸಲು ಮಾಜಿ ಸಚಿವ ವಿ.ಎಸ್.ಆಚಾರ್ಯ ಕಾರಣರಾಗಿದ್ದು, ಉಡುಪಿಯಲ್ಲಿ 29 ಎಕರೆಯಲ್ಲಿ ತರಬೇತಿ ಕೇಂದ್ರ ಮಾಡಿದ್ದಾರೆ. ಅವರ ಹುಟ್ಟು ಹಬ್ಬದ ಸ್ಮರಣಾರ್ಥ ವನಮಹೋತ್ಸವ ಆಚರಿಸಲಾಗುತ್ತಿದೆ ಎಂದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿ ಮುನಿರಾಜು ಮಾತನಾಡಿ, ಜುಲೈ 7ರವರೆಗೆ ವನಮಹೋತ್ಸವ ಆಚರಿಸಲಾಗುತ್ತಿದೆ. ಜನರ ಸಹಭಾಗಿತ್ವದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ವತ್ಸಲಾ, ಸೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾದ ಮೋಹನ್ ಬಾಬು, ನಾಗರಾಜ್, ಸಹಾಯಕ ಜಿಲ್ಲಾ ಆಯುಕ್ತರಾದ ಏಕಾಶಿಪುರ ವೆಂಕಟ ರಾಜು, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀನಿವಾಸ ಪ್ರಸಾದ್, ಅರುಣ್ ಕುಮಾರ್ ಜಿಲ್ಲಾ ಉಪಾಧ್ಯಕ್ಷೆ ರಾಜಮ್ಮ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಜೈಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….