ಬೆಂಗಳೂರು, (ಜುಲೈ.08): ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವ ವೇಳೆ ಭದ್ರತಾ ಲೋಪವಾಗಿದ್ದು, ಸದನದಲ್ಲಿ ಶಾಸಕರ ಜಾಗದಲ್ಲಿ 15 ನಿಮಿಷ ಕೂತಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಬಿಗಿ ಭದ್ರತೆಯಿದ್ದರೂ ಅನಾಮಧೇಯ ವ್ಯಕ್ತಿಯೊಬ್ಬ ಆರಾಮಾಗಿ ವಿಧಾನಸಭೆಗೆ ಪ್ರವೇಶಿಸಿ ಶಾಸಕರ ಸ್ಥಾನದಲ್ಲಿ ಕುಳಿತಿದ್ದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಆ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕರಿಯಪ್ಪ ಅಲಿಯಾಸ್ ತಿಪ್ಪೆರುದ್ರ ಎಂದು ಗುರುತಿಸಲಾಗಿದೆ.
ಸುಮಾರು 15 ನಿಮಿಷಗಳ ಕಾಲ ಶಾಸಕರ ಜಾಗದಲ್ಲಿ ಕುಳಿತಿದ್ದ ಕರಿಯಪ್ಪ ನಂತರ ಎದ್ದು ಹೋಗಿದ್ದಾನೆ ಎನ್ನಲಾಗಿದೆ.
ದೇವದುರ್ಗ ಶಾಸಕಿ ಕರೆಮ್ಮ ಅವರ ಸೀಟಿನಲ್ಲಿ ಕುಳಿತಿದ್ದ. ಗುರುಮಿಠಕಲ್ ಶಾಸಕ ಶರಣಗೌಡ ಕುಂದಕೂರ್ ಇದನ್ನು ಗಮನಿಸಿದ್ದು, ಈ ಬಗ್ಗೆ ಮಾರ್ಷಲ್ ಗಳಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಶಾಸಕ ಶರಣಗೌಡ ಕುಂದಕೂರ್, ಜಿ.ಟಿ.ದೇವೇಗೌಡರ ಬಳಿ ಆತ ಗೊತ್ತಾ ಎಂದು ಕೇಳಿದೆ, ಅವರು ಯಾರೋ ಗೊತ್ತಿಲ್ಲ ಎಂದರು. ನಾನೇ ಹೋಗಿ ಆತನ ಬಳಿ ಪ್ರಶ್ನೆ ಮಾಡಿದ್ದಕ್ಕೆ ನಾನು ಮೊಳಕಾಲ್ಮೂರು ಶಾಸಕ ಎಂದು ಹೇಳಿದ, ಇದನ್ನು ಸ್ಪೀಕರ್ ಯು.ಟಿ. ಖಾದರ್ ಗಮನಕ್ಕೆ ತಂದಿದ್ದೇನೆ. ಬಳಿಕ ಮಾರ್ಷಲ್ ಗಳು ಆತನನ್ನು ಹೊರಗೆ ಕರೆದೊಯ್ದರು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ವಿಧಾನಸಭೆಗೆ ವ್ಯಕ್ತಿಯೊಬ್ಬ ನುಸುಳಿದ್ದೂ ಐತಿಹಾಸಿಕ ಘಟನೆಯೇ: ಸಿದ್ದರಾಮಯ್ಯ ಅವರು ತಮ್ಮ ಐತಿಹಾಸಿಕ 14ನೇ ಬಾರಿಗೆ ಬಜೆಟ್ ಮಂಡಿಸಿದ ದಿನವೇ ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ ವ್ಯಕ್ತಿಯೊಬ್ಬರು ನುಸುಳಿರುವ ಐತಿಹಾಸಿಕ ಘಟನೆಯೂ ನಡೆದಿದೆ ಎಂದು ಕಂದಕೂರು ವ್ಯಂಗ್ಯವಾಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….