ಬೆಂಗಳೂರು, (ಜುಲೈ 08): ಅಮರನಾಥದಲ್ಲಿ ಸಿಲುಕಿದ್ದ ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಅಮರನಾಥ್ ನಲ್ಲಿ ಸಿಲುಕಿರುವ ಕರ್ನಾಟಕದ ಯಾತ್ರಾರ್ಥಿಗಳ ರಕ್ಷಣೆಗೆ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿಯವರನ್ನು ನೇಮಿಸಲಾಗಿದೆ. ಮಳೆಯಾಗುತ್ತಿರುವುದರಿಂದ ಅವರನ್ನು ಹೆಲಿಕಾಪ್ಟರ್ ಅಥವಾ ವಿಮಾನದ ಮೂಲಕ ರಕ್ಷಿಸಲಾಗುತ್ತಿಲ್ಲ. ನಮ್ಮ ಅಧಿಕಾರಿಗಳು ಅಲ್ಲಿನ ಪ್ರಾದೇಶಿಕ ಆಯುಕ್ತರು ಹಾಗೂ ಡಿಸಿ, ಮತ್ತು ಪೊಲೀಸರೊಂದಿಗೆ ಮಾತನಾಡಿದ್ದಾರೆ. ಮಳೆ ಕಡಿಮೆಯಾದ ನಂತರ ರಕ್ಷಣಾ ಕಾರ್ಯ ನಡೆಸಲಾಗುತ್ತದೆ ಎಂದರು.
ಅರಣ್ಯ ಬೆಳೆಸಲು ಸರ್ಕಾದ ಜೊತೆ ಜನರು ಕೈಜೋಡಿಸಬೇಕು: ಅರಣ್ಯ ಬೆಳೆಸುವುದು ಸರ್ಕಾರದ ಹಾಗೂ ಜನರ ಕರ್ತವ್ಯ. ವೈಜ್ಞಾನಿಕವಾಗಿ ಅಗತ್ಯವಿರುವಷ್ಟು ಅರಣ್ಯ ಪ್ರದೇಶ ನಮ್ಮಲ್ಲಿ ಇಲ್ಲ. ಪ್ರತಿ ವರ್ಷ ಸಸಿ ನೆಡಲು ಹಣ ಖರ್ಚು ಮಾಡಿದರೂ ನಮಗೆ ಅಗತ್ಯವಿರುವಷ್ಟು ಅರಣ್ಯವಿಲ್ಲ. ಕಾಡು ಬೆಳೆಸುವ ಭಾವನೆ ಜನರಲ್ಲಿಯೂ ಮೂಡಿ ಸರ್ಕಾರದ ಜೊತೆಗೆ ಸಹಕರಿಸಬೇಕು ಎಂದರು.
ಈ ವರ್ಷ 5 ಕೋಟಿ ಗಿಡ ನೀಡಬೇಕೆಂಬ ಉದ್ದೇಶವಿದೆ. ಐದು ಕೋಟಿ ಸಸಿಗಳೂ ಬದುಕುವುದಿಲ್ಲ. ಶೇ 50 ಕ್ಕಿಂತಲೂ ಕಡಿಮೆ ಗಿಡಗಳು ಬದುಕುಳಿಯುತ್ತವೆ. ಹಾಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಕಾಡು ಬೆಳೆದಿಲ್ಲ ಎಂದರು.
ತೆಂಗಿನ ಸಸಿ ನೆಟ್ಟ ಸಿಎಂ: ಇಂದು ಸ್ವಾಭಿಮಾನಿ ಪಾರ್ಕ್ ಹಾಗೂ ವನಮಹೋತ್ಸವ ಉದ್ಘಾಟಿಸಿದ್ದು, ತೆಂಗಿನ ಸಸಿಯನ್ನು ನೆಟ್ಟಿರುವುದಾಗಿ ತಿಳಿಸಿದರು. ಹಿಂದೆಯೂ ಒಂದು ಗಿಡ ನೆಟ್ಟಿದ್ದು ಅದು ಚೆನ್ನಾಗಿ ಬೆಳೆದಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….