ಬೆಂಗಳೂರು, (ಜುಲೈ.10): ಗ್ಯಾರೆಂಟಿ ಯೋಜನೆಗಳ ಜಾರಿಯಲ್ಲಿ ನುಡಿದಂತೆ ನಡೆಯದ ಕವಲು ದಾರಿಯಲ್ಲಿ ಸರ್ಕಾರ ನಡೆಯುತ್ತಿದ್ದು, ಒಂದೇ ತಿಂಗಳಲ್ಲಿ ಅಪಖ್ಯಾತಿಗೆ ಒಳಗಾದ ಸರ್ಕಾರ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಚ ಗ್ಯಾರಂಟಿ ಜಾರಿಗೊಳಿಸುವಲ್ಲಿ ಗೊಂದಲ ಇದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅಂತ ಆರೋಪ ಮಾಡಿದ್ದೀರಿ, ಎಫ್‌ಸಿಐ ಅಧಿಕಾರಿಗೆ ಒಂದು ರಾಜ್ಯಕ್ಕೆ ಅಕ್ಕಿ ಕೊಡುವ ಅಧಿಕಾರ ಇಲ್ಲ.
ನೀವು ಕೇಂದ್ರ ಸರ್ಕಾರದ ಜತೆ ಮಾತಾಡಬೇಕಿತ್ತು ಅಷ್ಟಕ್ಕೂ ಕೇಂದ್ರ ಸರ್ಕಾರ ನಿಮ್ಮ ಅನ್ನ ಭಾಗ್ಯಕ್ಕೆ ಅಕ್ಕಿ ಕೊಡ್ತೀವಿ ಅಂತ ಹೇಳಿತ್ತಾ ? ಕೇಂದ್ರದ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡಿದ್ದಿರಾ ಎಂದು ಪ್ರಶ್ನಿಸಿದರು.
ಮಾನ್ಸೂನ್ ಕಾರಣದಿಂದ ಅಕ್ಕಿ ಅಲಭ್ಯತೆ ಇದೆ, ಹಾಗಾಗಿ ಕೇಂದ್ರ ಅಕ್ಕಿ ಕೊಡಕ್ಕಾಗಿಲ್ಲ ಪಂಜಾಬ್ ಸರ್ಕಾರ ಅಕ್ಕಿ ಕೊಡಲು ತಯಾರಾಗಿದ್ದರು, ಆಂಧ್ರಪ್ರದೇಶ, ಛತ್ತೀಸ್‌ಗಡ ಸರ್ಕಾರಗಳು ಸಹಾಯ ಮಾಡಲು ಮುಂದಾಗಿದ್ದವು. ತೆಲಂಗಾಣ ಸರ್ಕಾರ ಭತ್ತ ಕೊಡಲು ಸಿದ್ದರಿದ್ದರು. ನಿಮಗೆ ಜನರಿಗೆ ಅಕ್ಕಿ ಕೊಡುವ ಇಚ್ಛಾಶಕ್ತಿ ಇಲ್ಲ. ಈಗ ದುಡ್ಡು ಕೊಡಲು ಮುಂದಾಗಿದ್ದೀರಾ, ಜನರು ಹಣ ತಿಂತಾರಾ ಅಂತ ಸಿಎಂ ಕೇಳಿದ್ದಾರೆ. ಸರ್ಕಾರ 5 ಕೆಜಿ ಅಕ್ಕಿ ಬದಲು 170 ರೂ. ನೀಡುವುದು ಒಬ್ಬ ಬಡ ಮಹಿಳೆಯ ಅರ್ಧ ದಿನದ ಕೂಲಿಗೆ ಸಮವಾಗಿದೆ ಎಂದು ಹೇಳಿದರು.
ಅಕ್ಕಿ ಕೊಡುವುದು ಹೊಸತೇನಲ್ಲ: ಪಡಿತರ ವ್ಯವಸ್ಥೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇದೆ. ಇಂಗ್ಲೆಂಡಿನ ಆಡಳಿತದ ಕಾಲದಿಂದಲೇ ಪಡಿತರ ಕೊಡುವ ವ್ಯವಸ್ಥೆ ಇತ್ತು. ಆಗ ದುಡ್ಡು ತೆಗೆದುಕೊಂಡು ಪಡಿತರ ಕೊಡುತ್ತಿದ್ದರು. ಅಕ್ಕಿ, ಸಕ್ಕರೆ, ಗೊಧಿ ಕೊಡುತ್ತಿದ್ದರು.
ಆ ಮೇಲೆ ಆಹಾರ ಭದ್ರತಾ ಕಾಯ್ದೆ ಬಂದ ನಂತರ ಪಡಿತರ ವ್ಯವಸ್ಥೆಯನ್ನು ಕಾನೂನು ವ್ಯಾಪ್ತಿಗೆ ತರಲಾಯಿತು. ಮೊದಲು ಕೇಂದ್ರ ಸರ್ಕಾರ 3 ರೂ. ಗೆ ಕೊಡಲಾಗುತ್ತಿತ್ತು. ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ 5 ಕೆಜಿ ಉಚಿತವಾಗಿ ಕೊಡುತ್ತಿದೆ. ಈಗ ಹೆಚ್ಚಿಗೆ ಕೊಡಲು ರಾಜ್ಯ ಸರ್ಕಾರ ಕೊಡಬೇಕಿದೆ. ನಮ್ಮ ಸರ್ಕಾರದ ಅವಧಿಯಲ್ಲೂ 10 ಕೆಜಿ ಕೊಡುತ್ತಿದ್ದೇವು. ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ನಿರಂತರವಾಗಿ ಮಾರಾಟವಾಗುತ್ತಿವೆ. ಹೆಚ್ಚು ಅಕ್ಕಿ ಕೊಟ್ಟಷ್ಟು ಕಾಳ ಸಂತೆಕೋರರಿಗೆ ಉತ್ತೇಜನ ನೀಡಿದಂತಾಗಬಾರದು. ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟಾವಾಗುತ್ತಿರುವುದಕ್ಕೆ ಕಾಲ ಕಾಲಕ್ಕೆ ಪ್ರಕರಣಗಳು ದಾಖಲಾಗುತ್ತಿರುವುದೇ ಸಾಕ್ಷಿ. ಅದರಿಂದ ಒಬ್ಬ ಐಎಎಸ್ ಅಧಿಕಾರಿ ಸಾವಿಗೀಡಾಗಿದ್ದಾರೆ. ಅಷ್ಟೊಂದು ಅಕ್ಕಿ ಕೊಡುವ ಬದಲು ರಾಗಿ, ಜೋಳ ನೀಡಿದರೆ ನಮ್ಮ ರೈತರಿಗೆ ಅನುಕೂಲವಾಗುತ್ತದೆ. ಆರೋಗ್ಯಕ್ಕೂ ಒಳ್ಳೆಯದಾಗುತ್ತದೆ ಎಂದು ಸಲಹೆ ನೀಡಿದರು.
ಜಾರಿಯಾಗದ ಯುವನಿಧಿ: ಯುವನಿಧಿ ಯೋಜನೆ ಪದವಿ ಮುಗಿಸಿ ಆರು ತಿಂಗಳು ಉದ್ಯೋಗ ಸಿಗದವರಿಗೆ ನೀಡುವುದಾಗಿ ಹೇಳುತ್ತಾರೆ. ಪದವಿಮುಗಿಸಿ ಎರಡು ಮೂರು ವರ್ಷ ಕಳೆದರೂ ಉದ್ಯೋಗ ಸಿಗದವರಿಗೆ ಯುವನಿಧಿ ನೀಡಿದ್ದರೆ ಅನುಕೂಲ ಆಗುತ್ತಿತ್ತು. ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಿರಿ.
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್ ವಿದ್ಯುತ್ ಉಚಿತ ಕೊಡುವುದಾಗಿ ಹೇಳಿ, ಈಗ ವಾರ್ಷಿಕ ಬಳಕೆಯ ಸರಾಸರಿ ಮೇಲೆ ಹತ್ತು ಪರ್ಸೆಂಟ್ ಹೆಚ್ಚಿಗೆ ನೀಡುವುದಾಗಿ ಹೇಳುತ್ತಿದ್ದೀರಿ. ಗ್ರಾಮೀಣ ಮಹಿಳೆಯರಿಗೆ ಉತ್ತಮ ಜೀವನ ನಡೆಸಲು ಅವಕಾಶ ಕಲ್ಪಿಸಬಾರದೇ ಅವರಿಗೆ ಉಚಿತ ವಿದ್ಯುತ್ ನಿಂದ ಬೇರೆ ಬೇರೆ ಕೆಲಸಗಳಿಗೆ ಅನೂಕೂಲ ಆಗುತ್ತಿರಲಿಲ್ಲವೇ,ನಗರದ ಮಹಿಳೆಯರೂ ಮಾತ್ರ ಉತ್ತಮ ಜೀವನ ನಡೆಸಬೇಕಾ, ಹಳ್ಳಿ ಮಹಿಳೆಯರು ಹೊಗೆ ಕುಡಿತಾ ಇರಬೇಕಾ ಎಂದು ಪ್ರಶ್ನಿಸಿದರು.
ಈ ಮಧ್ಯೆ ಕರೆಂಟ್ ದರ ಹೆಚ್ಚಳ ಮಾಡಿ ಜನರಿಗೆ ಭಾರ ಹಾಕಿದ್ದಾರೆ. ಗೃಹಜ್ಯೋತಿ ಯೋಜನೆ ಅನಷ್ಠಾನದಲ್ಲಿ ನುಡಿದಂತೆ ನಡೆದಿಲ್ಲ. ಗೃಹ ಲಕ್ಷ್ಮೀ ಯೋಜನೆಯಲ್ಲಿ ಅತ್ತೆ ಸೊಸೆಗೆ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ. ಗೃಹಲಕ್ಷ್ಮೀಗೆ ಗೃಹಣ ಹಿಡಿದಿದೆ.
ಹೆಣ್ಣು ಮಕ್ಕಳಿಗೆ ಬಸ್ ಪಾಸ್ ವ್ಯವಸ್ಥೆ ಮಾಡಿದ್ದಾರೆ. ಅದರ ಆವಾಂತರ ಎಲ್ಲರೂ ನೋಡಿದ್ದೇವೆ. ಪುರುಷರಿಗೂ ಮಹಿಳೆಯರ ಟಿಕೆಟ್ ಕೊಟ್ಟು ಕಾರ್ಪೊರೇಷನ್ ಹೆಚ್ಚಿನ ಹಣ ಪಡೆಯಲು ಪ್ರಯತ್ನ ನಡೆದಿದೆ. ಈ ಮಿಸ್ ಯೂಸ್ ತಪ್ಪಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಹಳ್ಳಿಗಳಲ್ಲಿ ಶಾಲೆ, ಆರೋಗ್ಯ ಸೇವೆ ಅಗತ್ಯವಿದೆ. ಉದ್ಯೋಗ ಸೃಷ್ಟಿ ಮಾಡಬೇಕು. ನಮ್ಮ ಅವಧಿಯಲ್ಲಿ ವಾರ್ಷಿಕ 6 ಲಕ್ಷ 36 ಸಾವಿರ ಉದ್ಯೊಗ ಸೃಷ್ಟಿಯಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ಹೆಚ್ಚುವರಿ ಹಣ ಸಂಗ್ರಹ ಮಾಡಬೇಕು.ಇದು ಪ್ರತಿ ವರ್ಷ 52 ಸಾವಿರ ಕೋಟಿ ಹಣ ಸಂಗ್ರಹ ಮಾಡಬೇಕು. ಈ ಹಿನ್ನೆಲೆಯಲ್ಲಿ ಕೃಷ್ಣಾ, ಕಾವೇರಿ, ಮೇಕೆದಾಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಗುವುದಿಲ್ಲ. ನೀರಾವರಿ ಯೋಜನೆಗಳಿಗೆ ಇದರಿಂದ ದೊಡ್ಡ ಹೊಡೆತ ಬೀಳುತ್ತದೆ ಎಂದು ಹೇಳಿದರು.
ನಮ್ಮ ಯೋಜನೆಗಳ ಬದಲಾವಣೆ: ಶಿಕ್ಷಣದ ಬಗ್ಗೆ ಬಹಳ ಮಾತನಾಡುತ್ತಾರೆ. ನಾವು ಒಂದೇ ವರ್ಷ 8 ಸಾವಿರ ಶಾಲೆಗಳ ನಿರ್ಮಾಣಕ್ಕೆ ಆದೇಶ ಮಾಡಿದ್ದೇವೆ. ಮೂರು ವರ್ಷದಲ್ಲಿ 24 ಸಾವಿರ ಶಾಲಾ ಕಟ್ಟಡ ನಿರ್ಮಾಣ ಮಾಡುವ ಗುರಿ ಇತ್ತು. ನೀವು ನಮ್ಮ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದೀರಿ ಹೊಸದಾಗಿ ಶಾಲಾ ಕಟ್ಟಡನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇನ್ನು ಶಿಕ್ಷಣದಲ್ಲೂ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಐಟಿಐಗಳನ್ನು ಮೇಲ್ದರ್ಜೆಗೆ ಏರಿಸಿದ್ದೇವು. ನೀವು ಅವುಗಳನ್ನು ಕೈ ಬಿಟ್ಟೀದ್ದೀರಿ.
ಮಕ್ಕಳು ಮುಕ್ತವಾಗಿ ಅಧ್ಯಯನ ಮಾಡಲು ಎನ್ ಇಪಿ ಜಾರಿ ಮಾಡಿದ್ದೇವು. ನಿವು ಅದನ್ನು ಬದಲಾವಣೆ ಮಾಡಿದ್ದೀರಿ, ನಾವು ಮಾಡಿದ್ದನ್ನೆಲ್ಲ ಬದಲಾವಣೆ ಮಾಡಲಿಕ್ಕೆ ನೀವು ಬಂದಿದ್ದರೆ ಮಾಡಿ, ಆದರೆ, ನೀತಿಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ ಎಂದು ಹೇಳಿದರು.
ರಾಜ್ಯಪಾಲಯ ಭಾಷಣ ನೋಡಿದರೆ ಸರ್ಕಾರ ಕವಲು ದಾರಿಯಲ್ಲಿದೆ ಅನಿಸುತ್ತಿದೆ. ವಿದ್ಯಾನಿಧಿ ಯೋಜನೆಯಿಂದ ಸುಮಾರು 8 ಲಕ್ಷ ರೈತರ ಮಕ್ಕಳಿಗೆ ಅನುಕೂಲವಾಗುತ್ತಿತ್ತು. ರೈತರಿಗೆ ಬಿತ್ತನೆಗೆ ಅನುಕೂಲವಾಗಲು 10 ಸಾವಿರ ರೂ. ನೀಡುವ ಭೂ ಸಿರಿ ಯೋಜನೆ ಇತ್ತು ಅದನ್ನು ಕೈ ಬಿಟ್ಟಿದ್ದೀರಿ. ರೈತರಿಗೆ ಅನ್ಯಾಯ ಮಾಡುವುದು ನಿಮ್ಮದು ಯಾವ ರೀತಿಯ ರೈತಪರ ಸರ್ಕಾರ ಎಂದು ಪ್ರಶ್ನಿಸಿದರು.
ಹತ್ತು ವರ್ಷದ ಹಗರಣಗಳ ತನಿಖೆ ನಡೆಸಿ: ವರ್ಗಾವಣೆಗೆ ಶಾಸಕರ ಭವನ, ಕುಮಾರಕೃಪಾ ಸುತ್ತಮುತ್ತ ಜನಜಂಗುಳಿ, ಹಪ್ತಾ ವಸೂಲಿಗೆ ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗಿ ಪೇದೆ ಆತ್ಮಹತ್ಯೆಗೆ ಯತ್ನ” ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪರಿಯನ್ನು ಮಾಜಿ ಬಸವರಾಜ ಬೊಮ್ಮಾಯಿ ಬಿಚ್ಚಿಟ್ಟ ಪರಿ ಇದು.
ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಬೇಕೆಂದರೆ 2013 ರಿಂದ 2023 ರ ವರೆಗಿನ ಎಲ್ಲ ಪ್ರಕರಣಗಳ ತನಿಖೆ ನಡೆಸಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಇರುವಾಗ ಅದನ್ನು ನಿಷ್ಕ್ರೀಯಗೊಳಿಸಿ ಎಸಿಬಿ ರಚನೆ ಮಾಡಿದ್ದರು. ಭ್ರಷ್ಟಾಚಾರದಿಂದ ರಕ್ಷಣೆ ಪಡೆಯಲು ಎಸಿಬಿ ರಚನೆ ಮಾಡಿದ್ದರು ಅಂತ ಕೋರ್ಟ್ ಆದೇಶದಲ್ಲಿಯೇ ಇದೆ ಎಂದು ಹೇಳಿದರು.
ಭ್ರಷ್ಟಾಚಾರ ನಿಯಂತ್ರಣ ಮಾಡಲು 2013 ರಿಂದ 2023 ರ ವರೆಗಿನ ಎಲ್ಲ ಪ್ರಕರಣಗಳ ತನಿಖೆ ನಡೆಸಿ, ಈ ಸಮಯದಲ್ಲಿ ನಡೆದ ಹಗರಣಗಳ ಬಗ್ಗೆ ಯಾರೇ ದೂರು ಕೊಟ್ಟರೂ ತನಿಖೆ ನಡೆಸಿ. ಹಲವಾರು ಸಂದರ್ಭದಲ್ಲಿ ನ್ಯಾಯಾಂಗ ಆಯೋಗದ ತನಿಖೆಗಳನ್ನು ನೋಡಿದ್ದೇವೆ. ಮುಕ್ತವಾದ ಸತ್ಯ ಹೊರಬೇಕೆಂದರೆ ನಮ್ಮ ಕಾಲದ ನಿಮ್ಮ ಕಾಲದ ಎರಡೂ ಹಗರಣ ಹೊರ ಬರಲಿ ಎಂದು ಆಗ್ರಹಿಸಿದರು.
ಹಪ್ತಾ ವಸೂಲಿಗೆ ಒತ್ತಡ: ಅಧಿಕಾರಿಗಳ ಮೇಲೆ, ಕಾನ್ ಸ್ಟೇಬಲ್ ಗಳ ಮೇಲೆ ಒತ್ತಡ ಹೇರಿ ಹಪ್ತಾ ವಸೂಲಿ ಮಾಡಲಾಗುತ್ತಿದೆ. ಬೀದರ್ ನಲ್ಲಿ ಒಬ್ಬ ಏಜೆಂಟ್ ಹಪ್ತಾ ವಸೂಲಿ ಮಾಡಲಿಕ್ಕೆ ಇಟ್ಟುಕೊಂಡಿದ್ದಾರೆ. ಅವನು ಹಪ್ತಾ ವಸೂಲಿ ಮಾಡಿದರೂ ಮತ್ತೆ ಗಾಡಿ ನಿಲ್ಲಿಸಿ ಮತ್ತೆ ಹಪ್ತಾ ವಸೂಲಿ ಮಾಡುವಂತೆ ಕೊರವಿ ಎನ್ನುವ ಇನ್ಸ್ ಪೆಕ್ಟರ್ ಒತ್ತಡ ಹೇರಿದ್ದಾರೆ ಅಂತ ದೂರು ದಾಖಲಿಸಿದ್ದಾರೆ. ಎಫ್ ಐ ಆರ್ ಕೂಡ ಆಗಿದೆ.
ಕಲಬುರ್ಗಿಯಲ್ಲಿ ಹಿರಿಯ ಅಧಿಕಾರಿಗಳು ಹಪ್ತಾ ವಸೂಲಿ ಮಾಡುವಂತೆ ಒತ್ತಡ ಹೇರಿದ್ದಕ್ಕೆ ಕಾನ್ ಸ್ಟೇಬಲ್ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಯಾವ ಅಧಿಕಾರಿ ಒತ್ತಡ ಹೇರಿದ್ದರು ಅಂತ ಅವರ ಹೆಸರುಕೂಡ ಪೇದೆ ಹೇಳಿದ್ದಾರೆ. ಅವರ ಮೇಲೆ ಒತ್ತಡ ತಂದು ಹೇಳಿಕೆ ತಿರುಚುವ ಪ್ರಯತ್ನ ಕೂಡ ಮಾಡಲಾಗಿದೆ ಎಂದು ಆರೋಪಿಸಿದರು.
ವರ್ಗಾವಣೆ ದಂಧೆ: ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಶಾಸಕರ ಭವನ, ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಜನ ತುಂಬಿಕೊಂಡಿದ್ದಾರೆ. ಇವರಿಂದ ಸ್ವಚ್ಚ ಆಡಳಿತ ನಿರೀಕ್ಷಿಸಲಾಗುತ್ತಾ. ವಿಧಾನಸೌಧದ ಸುತ್ತ ಜನವೋ ಜನ ತುಂಬಿ ತುಳುಕುತ್ತಿದೆ. ಎಲ್ಲರೂ ಫುಲ್ ಬಿಜಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪೌರ ಕಾರ್ಮಿಕರ ಕಾಯಂ ಮಾಡಿ: ಪೌರ ಕಾರ್ಮಿಕರನ್ನು ಕಾಯಂ ಮಾಡುವ ಕೆಲಸ ನಮ್ಮ ಅವಧಿಯಲ್ಲಿ ಆರಂಭವಾಗಿತ್ತು. 43 ಸಾವಿರ ಪೌರ ಕಾರ್ಮಿಕರನ್ನು ನಾವು ಗುರುತಿಸಿದ್ದೇವೆ. ರಾಜ್ಯದ ಎಲ್ಲ ನಗರಗಳ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಎಂದು ಸಲಹೆ ನೀಡಿದರು.
ಈ ಸರ್ಕಾರ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಯಾವುದೇ ಆದ್ಯತೆ ನೀಡಿಲ್ಲ. ನಾವು ಕಲ್ಯಾಣ ಕರ್ನಾಟಕ ಮಂಡಳಿಗೆ 5 ಸಾವಿರ ಕೋಟಿ ಮೀಸಲಿಟ್ಟಿದ್ದೇವು ಅದನ್ನು ಮುಂದುವರೆಸಿರುವುದು ಸ್ವಾಗತ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಗೆ ಮಂಡಳಿ ಮಾಡಿದ್ದೇವು. ಸರ್ಕಾರ ಬೋರ್ಡ್ ರಚನೆ ಮಾಡಬೇಕು ಇಲ್ಲದಿದ್ದರೆ ಹತ್ತರ ಕರ್ನಾಟಕ ಅಸಮಾನತೆ ಕೂಗು ಕೇಳಿ ಬರುತ್ತದೆ ಎಂದರು.
ಜಲ ಜೀವನ್ ಮಿಷನ್ ಅಡಿಯಲ್ಲಿ ನಾವು ಕಳೆದ ಮೂರು ವರ್ಷದಲ್ಲಿ ಮನೆ ಮನೆಗೆ ನೀರು ಕೊಡುವ ಕೆಲಸ ಮಾಡಿದ್ದೇವೆ. ಬಡವರಿಗೆ ಗ್ಯಾರೆಂಟಿ ಕೊಡುವುದಾಗಿ ಒಂದು ಕಡೆ ಹೇಳಿ ಇನ್ನೊಂದು ಕಡೆ ವಿದ್ಯುತ್, ಅಬಕಾರಿ ದರ ಹೆಚ್ಚಳ ಮಾಡಿ ಜನರ ಮೇಲೆ ಭಾರ ಹಾಕುತ್ತಿದ್ದಾರೆ. ಸುಮ್ಮನೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಕೇಂದ್ರದಿಂದ ಫಲಾನುಭವಿಗಳಿಗೆ ಬರುವ ನೇರ ನಗದು ಯೋಜನೆ ರಾಜ್ಯ ಸರ್ಕಾರದ ಲೆಕ್ಕಕ್ಕೆ ಬರುವುದಿಲ್ಲ. ನಾವು ಸಾಲ ಮಾಡಿದ್ದರೂ, ಫಿಸಿಕಲ್ ರಿಸ್ಪಾನ್ಸಿಬಿಲಿಟಿ ಆ್ಯಕ್ಟ್ ವ್ಯಾಪ್ತಿಯ ಒಳಗೆ ಮಾಡಿದ್ದೇವು ಎಂದು ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….