ದೊಡ್ಡಬಳ್ಳಾಪುರ, (ಜುಲೈ.20): ಭಾರತೀಯ ಪ್ರಾದೇಶಿಕ ಗೋವು ತಳಿಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಶೋಧನೆಗಾಗಿ ಜು.22 ಮತ್ತು 23 ಎರಡು ದಿನಗಳ ಕಾಲ ಗೋ ಸಂಗಮ ಕಾರ್ಯಕ್ರಮ ನಗರದ ಅರಳುಮಲ್ಲಿಗೆ ಗೇಟ್ ಸಮೀಪದ ಸರ್ಕಾರಿ ಶಾಲೆಯ ಆಟದ ಮೈಧಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಪ್ರಾದೇಶಿಕ ಗೋವು ತಳಿಗಳ ಪ್ರದರ್ಶನ, ಗೋವು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಪಂಚಗವ್ಯ ವಿಚಾರ ಸಂಕಿರಣಗಳು, ಪಂಚಗವ್ಯ ಚಿಕಿತ್ಸಾ ವಿಧಾನ ಕುರಿತು ಸಲಹಾ ಶಿಬಿರಗಳು ಗೋ ಸಂರಕ್ಷಣಾ ತಜ್ಞರಿಂದ ನಡೆಯಲಿವೆ ಎಂದು ಗೋಮಾತಾ ಸಹಕಾರ ಸಂಘದ ಅಧ್ಯಕ್ಷ ಡಾ.ವಿ.ಜೀವನ್ ಕುಮಾರ್ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶಿ ಗೋ ಸಾಕಾಣಿಕೆ ಅಪರೂಪವಾಗುತ್ತಿರುವ ಇಂದಿನ ದಿನಗಳಲ್ಲಿ ದೇಸಿ ಗೋವುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ದೇಸಿ ತಳಿಗಳು ಮಾತ್ರ ಗೋ ಪೂಜೆಗೆ ಅರ್ಹವಾಗಿದ್ದು, ವಿದೇಶಿ ತಳಿಗಳು ಹಾಲು ಕರೆಯುವ ಪ್ರಾಣಿಗಳಷ್ಟೇ. ಗೋವುಗಳ ಸಗಣಿ, ಗಂಜಲಗಳಿಂದ ಧೂಪ, ಸಾಂಬ್ರಾಣಿ, ಪಂಚಗವ್ಯ ಮೊದಲಾಗಿ ಹಲವು ಉತ್ಪನ್ನಗಳ ತಯಾರಿಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಬಗ್ಗೆ ಅರಿವು ಮೂಡಿಸುವಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಜು.22 ಮತ್ತು 23 ಸಂಜೆ 6.30ಕ್ಕೆ ವೇದೋಕ್ತ ಮಂತ್ರಗಳೊಂದಿಗೆ ಶುದ್ದ ದೀಪಗಳೊಂದಿಗೆ ಮಾತೆಯರಿಂದ ಗಂಗಾರತಿ ಮಾದರಿಯಲ್ಲಿ ಗೋ ಮಾತಾ ಪೂಜಾ ಮತ್ತು ಆರತಿ ಕಾರ್ಯಕ್ರಮಗಳಿವೆ.
ಜು.23ರಂದು ಬೆಳಿಗ್ಗೆ 9ರಿಂದ 3 ಗಂಟೆಯವರೆಗೆ ನುರಿತ ವೈದ್ಯರಿಂದ ಪಂಚಗವ್ಯ ಚಿಕಿತ್ಸಾ ಉಚಿತ ಸಲಹಾ ಶಿಬಿರ ಹಗೂ ನಿತ್ಯೋಪಯೋಗಿ ಗೋ ಉತ್ಪನ್ನಗಳ ತಯಾರಿಕಾ ಪ್ರಾತ್ಯಕ್ಷಿಕೆಯಿದೆ.
ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಡಾ.ಬಸವರಮಾನಂದ ಸ್ವಾಮೀಜಿ, ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಪಂಚಗವ್ಯ ಚಿಕಿತ್ಸಕ ಡಾ.ನಿರಂಜನ್ ವರ್ಮ ಸಾನಿಧ್ಯ ವಹಿಸಲಿದ್ದಾರೆ.
ಶಾಸಕ ಧೀರಜ್ ಮುನಿರಾಜು, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ವಿಶ್ವ ಹಿಂದು ಪರಿಷತ್ ಸಂಪರ್ಕ ಪ್ರಮುಖ ಮಂಜುನಾಥ ಸ್ವಾಮಿ ಮೊದಲಾದವರು ಭಾಗವಹಿಸಲಿದ್ದಾರೆ.
ಗೋ ಆಧಾರಿತ ಕೃಷಿ, ಗೋಉತ್ಪನ್ನಗಳ ತಯಾರಿಕೆ, ಪಂಚಗವ್ಯ ಚಿಕಿತ್ಸೆ ಕುರಿತಂತೆ ತಜ್ಞರಿಂದ ವಿಚಾರ ಸಂಕಿರಣ ನಡೆಯಲಿದೆ ಎಂದು ತಿಳಿಸಿದರು.
ಸುದ್ಧಿಗೋಷ್ಟಿಯಲ್ಲಿ ಗೋ ಸಂಗಮ ಕಾರ್ಯಕಾರಿ ಮಂಡಲಿಯ ಅಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ರಾಮಚಂದ್ರು, ಖಜಾಂಚಿ ಘನಶ್ಯಾಮ, ಸಹ ಕಾರ್ಯದರ್ಶಿಗಳಾದ ಸುರೇಶ್, ಉಮಾ ಮಹೇಶ್ವರಿ, ಸಹ ಸಂಚಾಲಕರಾದ ವತ್ಸಲಾ, ಯಶೋಧ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….