ಇಂದು ಜುಲೈ 29 ಅಂತರಾಷ್ಟ್ರೀಯ ಹುಲಿ ದಿನ. ಆಹಾರ ಸರಪಣಿಯಲ್ಲೂ ಹುಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿದೆ. ಆದರೆ ಪರಿಸರ ನಾಶ, ಹುಲಿಯ ಕಳ್ಳಬೇಟೆ, ಅಭಿವೃದ್ಧಿಯ ಹೆಸರಿನಲ್ಲಿ ನಡೆಸಲಾಗುವ ಕೆಲವೊಂದು ಕಾರ್ಯಗಳಿಂದ ಹುಲಿಯ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ.
ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಹುಲಿ ಗಂಭೀರವಾದ ಮತ್ತು ಭವ್ಯವಾದ ಪ್ರಾಣಿ. ಇತ್ತಿಚಿನ ದಿನಗಳಲ್ಲಿ ಅಳುವಿನಂಚಿನತ್ತ ಹುಲಿಯ ಸಂತತಿಯು ಸಾಗುತ್ತಿದೆ. ಕ್ಷೀಣಿಸುತ್ತಿರುವ ಹುಲಿಗಳ ಸಂಖ್ಯೆಯ ಕುರಿತಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.
ಅಕ್ರಮವಾಗಿ ನಡೆಸುತ್ತಿರುವ ವನ್ಯಜೀವಿಗಳ ವ್ಯಾಪಾರ, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹಾಗೂ ಕಾಡಿನ ನಾಶದಿಂದಾಗಿ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಜಗತ್ತಿನ ಕೇವಲ 13 ರಾಷ್ಟ್ರಗಳಲ್ಲಿ ಮಾತ್ರ ಹುಲಿಗಳು ಕಂಡುಬರುತ್ತವೆ. ಈ ಹಿನ್ನಲೆಯಲ್ಲಿ ಹುಲಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.
ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010ರ ಜುಲೈ 29ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್ ಪೀಟರ್ ಬರ್ಗ್‌ನಲ್ಲಿ ಆಚರಿಸಲಾಯಿತು. ಈ ದಿನದಂದು ಹುಲಿ ಸಂರಕ್ಷಣೆ ಕುರಿತು ಚರ್ಚೆ, ಉಪನ್ಯಾಸ, ಜಾಥಾ, ವಿಚಾರ ಸಂಕಿರಣ ಹಾಗೂ ಛಾಯಚಿತ್ರ ಪ್ರದರ್ಶನ ಮೂಲಕ ಹುಲಿ ಭೇಟೆ, ಹುಲಿಗಳ ರಕ್ಷಣೆಯ ಕುರಿತಾದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇಂದಿನ ದಿನಗಳಲ್ಲಿ ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಮತ್ತು ಹುಲಿ ಸಂರಕ್ಷಣೆಯನ್ನು ಉತ್ತೇಜಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. 2018ರ ಹುಲಿ ಗಣತಿ ಪ್ರಕಾರ ದೇಶದಲ್ಲಿ 2967 ಹುಲಿಗಳು ಇವೆ. ಈ ಮೂಲಕ ಜಗತ್ತಿನಲ್ಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳ ಭಾರತವಾಗಿದೆ. 2018ರ ಹುಲಿ ಗಣತಿ ಗೆ 1400 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಲಾಗಿತ್ತು. ಪ್ರಪಂಚದ 13 ದೇಶಗಳ ಕಾಡಿನಲ್ಲಿ ಮಾತ್ರ ಹುಲಿಗಳನ್ನು ನಾವು ಕಾಣಬಹುದಾಗಿದೆ. ವಿಶ್ವದಲ್ಲೇ ಅತಿಹೆಚ್ಚು ಹುಲಿಗಳು ಇರುವುದು ಅದು ಏಷ್ಯಾಖಂಡದಲ್ಲೇ.
ದೇಶದಲ್ಲಿ ಹುಲಿಗಳ ಸಂರಕ್ಷಣೆಗಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್ ಅಸ್ತಿತ್ವಕ್ಕೆ ಬಂತು. ನಂತರ ಇದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವಾಗಿ ಬದಲಾಗಿ ಹುಲಿಗಳ ಉಳಿವಿಗಾಗಿ ಕೆಲಸ ಮಾಡುತ್ತಿದೆ. ಸ್ಪೆಷಲ್ ಟೈಗರ್ ಪ್ರೊಟೆಕ್ಷನ್ ಫೋರ್ಸ್ ದೇಶದಲ್ಲೇ ಮೊದಲ ಬಾರಿಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಜಾರಿಗೆ ತರಲಾಗಿದೆ.
ಕರ್ನಾಟಕದ ಹುಲಿ ಸಂರಕ್ಷಿತ 5 ಪ್ರದೇಶಗಳು-ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರಾ ಹಾಗೂ ಕಾಳಿ.
ಹುಲಿ ಸಂರಕ್ಷಣೆಯಾದರೆ ಕಾಡು ಚೆನ್ನಾಗಿರುತ್ತದೆ. ಪ್ರಾಕೃತಿಕ ಸಮತೋಲನಕ್ಕೂ ಇದು ಸಹಕಾರಿ. ಒಂದು ಕಾಡಿನಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ ಎಂದರೆ ಆ ಕಾಡು ಸಮೃದ್ಧವಾಗಿದೆ ಎಂದರ್ಥ ಎನ್ನುತ್ತಾರೆ ವನ್ಯಜೀವಿ ತಜ್ಞರು. ಹುಲಿ ಇರುವ ಜಾಗದಲ್ಲಿ ಪಕ್ಷಿ, ಕೀಟ, ಕಾಡು ಪ್ರಾಣಿಗಳು ಹೇರಳವಾಗಿರುತ್ತವೆ. ಬಯೋ ಸಿಸ್ಟಂ ಕೂಡ ಉತ್ತಮವಾಗಿರುತ್ತದೆ ಎನ್ನಲಾಗುತ್ತದೆ.
ಪೋಟೋ ಕೃಪೆ: Kintoo Dhawan
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….