ಚಿಕ್ಕಬಳ್ಳಾಪುರ, (ಆ.09): ಆವಲಗುರ್ಕಿ ಬಳಿಯ ಈಶಾ ಆದಿಯೋಗಿ ಸನ್ನಿಧಾನದ ಬಳಿಯ ಶ್ರೀ ಜಾಲಾರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಬೆಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸುಮಾರು 50 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು ಗುರುತು ಪತ್ತೆಯಾಗಿಲ್ಲ.
ಹತ್ತಾರು ಕಿಲೋಮೀಟರ್ ಬೆಟ್ಟದ ಸಾಲಿದ್ದು ಸರಿಸುಮಾರು 05-06 ಕಿಲೋಮೀಟರ್ ದೂರದಲ್ಲಿ ಕುರಚಲು ಕಾಡಿನ ಮಧ್ಯೆ ವ್ಯಕ್ತಿಯ ಮೃತದೇಹ ಸಿಕ್ಕಿದೆ.
ಶ್ರೀ ಜಾಲಾರಿ ಲಕ್ಷ್ಮೀನರಸಿಂಹ ಸ್ವಾಮಿ ಬೆಟ್ಟದ ಬಳಿ ತರಬೇತಿಗಾಗಿ ಆರ್ಮಿ ಸೈನಿಕರು ಕ್ಯಾಂಪ್ ಹಾಕಿ ಕೂಂಬಿಂಗ್ ನಡೆಸುತ್ತಿದ್ದಾಗ ಬೆಟ್ಟದಲ್ಲಿ ಸೈನಿಕರ ಕಣ್ಣಿಗೆ ವ್ಯೆಕ್ತಿಯ ಶವ ಕಾಣಿಸಿದೆ.
ಈ ವಿಷಯವನ್ನು ಚಿಕ್ಕಬಳ್ಳಾಪುರ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್‌ರ ಗಮನಕ್ಕೆ ಸೈನಿಕರು ತಂದಾಗ, ಪೋಲಿಸ್ ವರಿಷ್ಠಾಧಿಕಾರಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಕೆ.ಪ್ರದೀಪ್ ಪೂಜಾರ್‌ರಿಗೆ ದೂರವಾಣಿ ಮುಖಾಂತರ ತಿಳಿಸಿದ್ದಾರೆ.
ತಕ್ಷಣ ಕಾರ್ಯ ಪ್ರವೃತ್ತರಾದ ಪಿಎಸ್‌ಐ ಪ್ರದೀಪ್ ಪೂಜಾರ್ ತಮ್ಮ ಸಿಬ್ಬಂದಿಗಳಾದ ರಮೇಶ್, ಮಂಜುನಾಥ್ ಮತ್ತು ಸಾಧಿಕ್‌ರೊಂದಿಗೆ ಜಾಲಾರಿ ಲಕ್ಷ್ಮೀನರಸಿಂಹ ಸ್ವಾಮಿ ಬೆಟ್ಟದ ಬಳಿ ತೆರಳಿ ಸೈನಿಕರೊಂದಿಗೆ ಬೆಟ್ಟ ಹತ್ತಿ,ಆರ್ಮಿ ಸೈನಿಕರ ನೆರವಿನಿಂದ ಮೃತದೇಹ ಹೊತ್ತು ಕೆಳಗೆ ತರಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‌ಐ ಪ್ರದೀಪ್ ಪೂಜಾರಿ ಹಾಗೂ ಅವರ ಸಿಬ್ಬಂದಿ ಸೇರಿದಂತೆ-ಸೈನಿಕರು ಬೆಟ್ಟದ ಕಾಡಿನಲ್ಲಿ ದೊರೆಯುವ ಮರ ಬಳ್ಳೀಗಳನ್ನು ಬಳಸಿ ಚಟ್ಟದ ಮಾದರಿ ತಯಾರು ಮಾಡಿ, 05-06 ಕಿಲೋಮೀಟರ್ ದುರ್ಗಮ ಹಾದಿಯಲ್ಲಿ ಸಾಕಷ್ಟು ಹರಸಾಹಸ ಪಟ್ಟು ಮೃತದೇಹವನ್ನು ಕೆಳಗೆ ಹೊತ್ತು ತಂದಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಿಎಸ್‌ಐ ಪ್ರದೀಪ್ ಪೂಜಾರ್ ಮೃತ ವ್ಯೆಕ್ತಿ ಸುಮಾರು ಐವತ್ತು ವರ್ಷದವರಾಗಿದ್ದು, ಈತ ಈಶ ಪೌಂಡೇಷನ್ ಬಳಿ ಒಡಾಡಿ ಕೊಂಡಿದ್ದ, ಕನ್ನಡ, ತೆಲುಗು ಬಾಷೆ ಮಾತನಾಡುತ್ತಿದ್ದು ಮಾನಸಿಕ ಅಸ್ವಸ್ಥನಂತೆ ವರ್ತನೆ ಇತ್ತೆಂದು ಈತನನ್ನು ಕಂಡವರು ಹೇಳಿದ್ದಾರೆ.
ಬಹುಷಃ ಈತ ಈಶ ಪೌಂಡೇಷನ್ ಬಳಿಯಿಂದ ಹತ್ತಿರದಲ್ಲೇ ಇರುವ ಜಾಲಾರಿ ನರಸಿಂಹ ಸ್ವಾಮಿ ಬೆಟ್ಟವನ್ನು ಮೂರು-ನಾಲ್ಕು ದಿನಗಳ ಹಿಂದೆ ಏರಿದ್ದು, ನೀರು,ಊಟ-ತಿಂಡಿ ಇಲ್ಲದೇ ಮೃತಪಟ್ಟಿರ ಬಹುದು ಎಂಬ ಶಂಕೆಯನ್ನು ವ್ಯೆಕ್ತ ಪಡಿಸಿದರು.
ಬೆಟ್ಟದ ಬಳಿ ತರಬೇತಿಗಾಗಿ ಸೈನಿಕರು ಕ್ಯಾಂಪ್ ಹಾಕಿ ಕೂಂಬಿಂಗ್ ನಡೆಸುತ್ತಿದ್ದಾಗ ಬೆಟ್ಟದಲ್ಲಿ ಸೈನಿಕರ ಕಣ್ಣಿಗೆ ಈ ಶವ ಕಂಡು ಬಂದ ಕಾರಣ ಅವರು ನಮ್ಮ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್‌ರ ಗಮನಕ್ಕೆ ತಂದ ಕೂಡಲೆ ನನಗೆ ಎಸ್.ಪಿ.ಯವರು ಮಾಹಿತಿ ನೀಡಿದರು.
ಮಾಹಿತಿ ಆಧರಿಸಿ ಸೈನಿಕರನ್ನು ಸಂಪರ್ಕಿಸಿದಾಗ ಅವರು ನನ್ನ ಮೊಬೈಲ್‌ಗೆ ಶವವಿದ್ದ ಲೊಕೇಷನ್ ಕಳುಹಿಸಿದ್ದೇ ಅಲ್ಲದೇ ಬೆಟ್ಟದ ಮೇಲಿನಿಂದ ದುರ್ಗಮ ಕಾಡು ಹಾದಿಯಲ್ಲಿ ಸುಮಾರು ಐದು ಕಿಲೋಮೀಟರ್ ಶವ ಹೊತ್ತು ತರಲು ಸಹಾಯ ಮಾಡಿದರು. ಸಹಾಯ ಮಾಡಿದ ಸೈನಿಕರಿಗೆ ತಮ್ಮ ಕೃತಜ್ಞತೆಗಳನ್ನು ಪ್ರದೀಪ್ ಪೂಜಾರ್ ತಿಳಿಸಿದರು.
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಅಪರಿಚಿತ ವ್ಯೆಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದ್ದು, ಮೃತರ ವಾರಸುದಾರರು ಯಾರಾದರೂ ಇದ್ದರೆ ತಮ್ಮನ್ನು ಸಂಪರ್ಕಿಸುವಂತೆ ಗ್ರಾಮಾಂತರ ಪೋಲಿಸರು ತಿಳಿಸಿದ್ದಾರೆ.
ಸೈನಿಕರ ಮತ್ತು ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….