ದೊಡ್ಡಬಳ್ಳಾಪುರ, (ಆ.11): ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿರುವ ಅಂತೆ ಕಂತೆಗಳ ಗಾಳಿ ಸುದ್ದಿ ನಡುವೆ ಕಾಂಗ್ರೆಸ್ ಮುಖಂಡರು ಸಂಚಾರಿ ಪೊಲೀಸ್ ಠಾಣೆ ಪ್ರಾರಂಭಿಸಿ, ಸುಗಮ, ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರೀತಂ ಶ್ರೇಯಕರ ಅವರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಸಂಚಾರ ಅವ್ಯವಸ್ಥೆ, ಗುರುವಾರ ಎಪಿಎಂಸಿ ಬಳಿ ನಡೆದ ಅಪಘಾತದ ಹಿನ್ನೆಲೆಯಲ್ಲಿ ಇಂದು ನಗರದ ಪೊಲೀಸ್ ಠಾಣೆ ಸಭಾಂಗಣದಲ್ಲಿ ಪೊಲೀಸ್ ಇಲಾಖೆ, ಕಾಂಗ್ರೆಸ್ ಮುಖಂಡರು, ನಗರಸಭೆ ಸದಸ್ಯರು, ಲೋಕೋಪಯೋಗಿ ಹಾಗೂ ಬೆಸ್ಕಾಂ ಅಧಿಕಾರಿಗಳ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ಶಿವಶಂಕರ್, ಮುಖಂಡರಾದ ಆದಿತ್ಯ ನಾಗೇಶ್, ಶ್ರೀನಗರ ಬಶೀರ್, ಮುನಿರಾಜು, ಆಂಜನಮೂರ್ತಿ, ಜಗದೀಶ್ ರೆಡ್ಡಿ, ನಗರದ ಪ್ರಮುಖ ರಸ್ತೆಗಳಲ್ಲಿ ಇತ್ತೀಚಿಗೆ ಅಪಘಾತ ಪ್ರಕರಣಗಳು ಹೆಚ್ಚಾಗಿದ್ದು, ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳನ್ನು ತೆರವು ಮಾಡಬೇಕಿದೆ.
ಪ್ರತಿ ನಿತ್ಯ ಸಂಭವಿಸುತ್ತಿರುವ ಅಪಘಾತಗಳಿಂದಾಗಿ ಸಾರ್ವಜನಿಕರು, ಶಾಲೆ ಮಕ್ಕಳು, ಸಾವನಪ್ಪುತ್ತಿದ್ದು, ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಗುರುವಾರ ಬೆಳಗ್ಗೆ ಮಗಳನ್ನು ಶಾಲೆಗೆ ಕರೆತರುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ತಂದೆ ಸಾವನಪ್ಪಿದ್ದು, ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುವ ಶೋಚನೀಯ ಸ್ಥಿತಿ ಎದುರಾಗಿದೆ.
ನಗರದಲ್ಲಿ ಪ್ರತಿನಿತ್ಯ ಎಪಿಎಂಸಿ, ಬಸವ ಭವನ, ಖಾಸ್ ಬಾಗ್, ಡಿಕ್ರಾಸ್, ರೈಲ್ವೇ ಸ್ಟೇಷನ್ ಕಡೆಗಳಲ್ಲಿ ಟ್ರಾಫಿಕ್ ದಟ್ಟಣೆ ತೀವ್ರವಾಗಿದ್ದು, ಸಿಬ್ಬಂದಿಗಳ ಕೊರತೆಯನ್ನು ಮುಂದು ಮಾಡದೆ, ಈ ಮುಂಚೆಯಂತೆ ಹೋಂ ಗಾರ್ಡ್ಸ್ ಸಿಬ್ಬಂದಿಗಳನ್ನು ನೇಮಿಸಿಕೊಂಡು ಸಮಸ್ಯೆ ಬಗೆಹರಿಸಬೇಕಿದೆ.
ಈ ಕುರಿತಂತೆ ನಗರ, ಕಸಬಾ, ಗ್ರಾಮಾಂತರ ಪೊಲೀಸರು ಮತ್ತು ನಗರಸಭೆ ಜಂಟಿಯಾಗಿ ಸಭೆ ಮಾಡಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಮನವಿ ಮಾಡಿದರು.
ಈ ಕುರಿತಂತೆ ಮಾತನಾಡಿ ಇನ್ಸ್‌ಪೆಕ್ಟರ್ ಪ್ರೀತಂ ಶ್ರೇಯಕರ, ಇಂದಿನ ಸಭೆಯ ಸಲಹೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಗುವುದು, ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾದಲ್ಲಿ ಹೆಚ್ಚಿನ ಸಿಬ್ಬಂದಿಗಳು ದೊರಕಲಿದ್ದಾರೆ. ಅಲ್ಲದೆ, ಫುಟ್ಬಾತ್ ತೆರವಿಗೆ ನಗರಸಭೆ ಮುಂದಾದಲ್ಲಿ ಸೂಕ್ತ ಭದ್ರತೆ ನೀಡಲಾಗುವುದೆಂದರು.
ನಗರಸಭೆ ಪ್ರಭಾರ ಪೌರಾಯುಕ್ತ ಕೆ.ಜಿ.ಶಿವಶಂಕರ್ ಮಾತನಾಡಿ, ಒತ್ತುವರಿಯಾಗಿರುವ ಫುಟ್ಬಾತ್ ತೆರವಿಗೆ ಒಂದು ವಾರದ ಗಡುವು ನೀಡಲಾಗುವುದು, ಹಾಗೂ ಬೆಸ್ಕಾಂ ನಿಂದ ನೀಡಲಾಗಿರುವ ವಿದ್ಯುತ್ ಸಂಪರ್ಕ ತೆರವು ಮಾಡಲು ಪತ್ರ ಬರೆಯಲಾಗುವುದು ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಪಿ.ಜಗನಾಥ್, ಅಪ್ಪಿ ವೆಂಕಟೇಶ್, ಬೈರೇಗೌಡ, ನಗರಸಭೆ ಸದಸ್ಯರಾದ ಆನಂದ್, ನಾಗರಾಜ್, ಶಿವು, ಮುಖಂಡರಾದ ಮುತ್ತಣ್ಣ, ಜವಾಜಿ ರಾಜೇಶ್, ಮಾರಪ್ಪ, ಅಶೋಕ್, ಅಂಬರೀಶ್, ರಾಮಚಂದ್ರ ರೆಡ್ಡಿ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….