ದೊಡ್ಡಬಳ್ಳಾಪುರ, (ಆ.11): ನಗರದ ಎಪಿಎಂಸಿ ಬಳಿ ಗುರುವಾರ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಟಿಪ್ಪರ್ ಚಕ್ರದಲ್ಲಿ ಸಿಲುಕಿ ಅಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮಗಳ ಕೈ ತುಂಡಾಗಿತ್ತು.
ಮಗಳನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಹೊರಟಿದ್ದ ಮುದ್ದನಾ ಯಕನಹಳ್ಳಿ ನಿವಾಸಿ ವೆಂಕಟೇಶ್ (42ವರ್ಷ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಗಳು ಯಶಸ್ವಿನಿ (16ವರ್ಷ) ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 24 ಗಂಟೆಗಳ ನಿಗಾ ನಂತರ ವೈದ್ಯರು ಮಾಹಿತಿ ನೀಡುತ್ತಾರೆಂದು ಮೂಲಗಳು ತಿಳಿಸಿವೆ.
ದಾಬಸ್‌ಪೇಟೆ ಕಡೆಯಿಂದ ಬಂದ ಟಿಪ್ಪರ್ ಎದುರುಗಡೆಯಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಟಿಪ್ಪರ್ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲೇ ವೆಂಕಟೇಶ್ ಮೃತಪಟ್ಟರು. ಮುಂದಿನ ಚಕ್ರಕ್ಕೆ ಸಿಲುಕಿದ ಯಶಸ್ವಿನಿಯ ಕೈ ತುಂಡಾಗಿತ್ತು.
ನಗರದ ರಂಗಪ್ಪ ವೃತ್ತದಲ್ಲಿನ ಖಾಸಗಿ ಡ್ರೈವಿಂಗ್ ಶಾಲೆಯಲ್ಲಿ ವಾಹನ ತರಬೇತುದಾರರಾಗಿದ್ದ ವೆಂಕಟೇಶ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಬಸವ ಭವನ ಸಮೀಪದ ಖಾಸಗಿ ಶಾಲೆಗೆ ಮಗಳನ್ನು ಪ್ರತಿದಿನ ಅವರೇ ಬೈಕ್‌ನಲ್ಲಿ ಬಿಟ್ಟು, ಕರೆತರುತ್ತಿದ್ದರು ಎನ್ನಲಾಗಿದೆ.
ಮನಕಲುಕಿದ ಬಾಲಕಿಯ ಆಕ್ರಂದನ ವಿಡಿಯೋ: ಅಪಘಾತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಕಿಯ ಒಂದು ಕೈ ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದು, ಲಾರಿ ಚಕ್ರದ ಅಡಿಯಲ್ಲಿ ಸಿಲುಕಿರುವ ಬಾಲಕಿಯ ಆಕ್ರಂದನದ ದೃಶ್ಯಗಳು ಮನಕಲುಕುವಂತಿವೆ.
ಬಸವ ಭವನದಿಂದ ಪ್ರವಾಸಿ ಮಂದಿರ ವೃತ್ತದವರೆಗಿನ ರಸ್ತೆಯಲ್ಲಿ ಇತ್ತೀಚಿಗೆ ಅಪಘಾತ ಹೆಚ್ಚುತ್ತಿವೆ. ಇಷ್ಟಾದರೂ ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳನ್ನು ತೆರವುಗೊಳಿಸುವ ಕಡೆಗೆ ಮಾತ್ರ ಗಮನ ಹರಿಸುತ್ತಲೇ ಇಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….