ಬೆಂಗಳೂರು, (ಆ.23): ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ಆರಂಭವಾಗಿದೆ.
ರಾಜ್ಯದಲ್ಲಿ ಕಾವೇರಿ ಕಳವಳ ಜೋರಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಮೇಲೆ ಬಿಜೆಪಿ ಮತ್ತು ಕೆಡಿಎಸ್ ನಾಯಕರು ಹರಿಹಾಯ್ದಿದ್ದಾರೆ.
ಇನ್ನೊಂದೆಡೆ ಮಳೆಯಿಲ್ಲದೆ ಜಲಾಶಯ ಬರಿದಾಗುತ್ತಿರುವ ಈ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸುತತ್ತಿರುವ ರಾಜ್ಯ ಸರಕಾರದ ವಿರುದ್ಧ ಮಂಡ್ಯ ಭಾಗದ ರೈತರೂ ಆಕ್ರೋಶಕ್ಕೆ ಒಳಗಾಗಿದ್ದಾರೆ.
ಇವೆಲ್ಲದರ ನಡುವೆ ಇನ್ನೂ 15 ದಿನಗಳ ಕಾಲ ಪ್ರತಿನಿತ್ಯ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ನ್ಯಾಯಾಲಯ ನೀಡಿರುವ ಸೂಚನೆಯನ್ನೂ ಪಾಲಿಸಬೇಕಾಗಿರುವ ಅನಿವಾರ್ಯತೆಯೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರಕ್ಕೆ ಎದುರಾಗಿದೆ.
ಈ ‘ಜಲ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಮತ್ತು ಈ ವಿಚಾರದಲ್ಲಿ ವಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲು ನಿರ್ಧರಿಸಿರುವ ರಾಜ್ಯ ಸರಕಾರ ಇಂದು ಸರ್ವಪಕ್ಷಗಳ ಸಭೆ ನಡೆಸಲಾಗುತ್ತಿದೆ.
ಈ ಸಭೆಯಲ್ಲಿ ಜಲ ಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ, ಡಿ.ವಿ. ಸದಾನಂದಗೌಡ, ವೀರಪ್ಪ ಮೊಯಿಲಿ, ಸಚಿವರಾದ ಹೆಚ್.ಕೆ. ಪಾಟೀಲ, ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಎಲ್ಲ ಪಕ್ಷಗಳ ಶಾಸಕರು ಸಂಸದರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿರಿಯ ವಕೀಲರಾದ ಮೋಹನ್ ಕಾತರಕಿ ಮತ್ತು ಇತರ ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.
ತಮಿಳುನಾಡು ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಯಾವ ರೀತಿ ಹೋರಾಟ ಮುಂದುವರಿಸಬೇಕು ಮತ್ತು ನೀರಿನ ಅಲ್ಪ ಲಭ್ಯತೆ ಬಗ್ಗೆ ಕೋರ್ಟಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಯಾವೆಲ್ಲಾ ಅಂಶಗಳನ್ನು ಮಂಡಿಸಬೇಕೆಂಬ ವಿಚಾರದಲ್ಲಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ತಮಿಳುನಾಡಿಗೆ ನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ನ್ಯಾಯಾಲಯ ನೀಡಿರುವ ಸೂಚನೆಯನ್ನು ಮರುಪರಿಶೀಲಿಸಬೇಕೆಂದು ರಾಜ್ಯ ಸರಕಾರ ಈಗಾಗಲೇ ಒತ್ತಾಯಿಸಿದೆ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಈಗಾಗಲೇ ಮರುಪರಿಶೀಲನಾ ಅರ್ಜಿಯನ್ನೂ ಸಲ್ಲಿಸಲಾಗಿದೆ.
ಸದ್ಯಕ್ಕೆ ಕಾವೇರಿ ಜಲಾನಯನ ಪ್ರದೇಶಕ್ಕೆ ಸಂಬಂಧಿಸಿದ ನಾಲ್ಕು ಜಲಾಶಯಗಳಲ್ಲಿ ಕೇವಲ 55 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಇದರಲ್ಲಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗಾಗಿ 24 ಟಿಎಂಸಿ ಹಾಗೂ ರಾಮನಗರ ಮತ್ತು ಮೈಸೂರು ಜಿಲ್ಲೆಗಳಿಗೆ 20 ಟಿಎಂಸಿ ನೀರಿನ ಅಗತ್ಯವಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….