ಬೆಂಗಳೂರು, (ಆ.25): ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಸದೃಢ ಭಾರತ ನಿರ್ಮಾಣ ಆಗಬೇಕು ಎಂಬ ಸಂಕಲ್ಪದೊಂದಿಗೆ ನನ್ನ ದೇಶ- ನನ್ನ ಮತ ಘೋಷವಾಕ್ಯದಡಿ ಮತದಾರ ಚೇತನ ಮಹಾ ಅಭಿಯಾನವನ್ನು ಸೆ. 1ರಿಂದ 10ರವರೆಗೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಈ ಮಹಾ ಅಭಿಯಾನಕ್ಕಾಗಿ 58 ಸಾವಿರ ಬೂತ್‌ಗಳಲ್ಲಿ ಬಿಎಲ್ಎ 2 (ಬೂತ್ ಲೆವೆಲ್ ಏಜೆಂಟ್) ಗಳನ್ನು ನೇಮಕ ಮಾಡಲಾಗುತ್ತಿದೆ. ಈ ಮೂಲಕ ಹೊಸ ಹೆಸರು ಸೇರ್ಪಡೆ, ಡಿಲೀಟ್ ಸೇರಿ ಅನೇಕ ಕಾರ್ಯಗಳನ್ನು ನಡೆಸಲಾಗುವುದು ಎಂದು ಹೊಸದಾಗಿ ಮತದಾನದ ಹಕ್ಕು ಪಡೆದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನೂ ಈ ಮೂಲಕ ಹೊಂದಲಾಗಿದೆ.
ಈ ಅಭಿಯಾನದ ಮೂಲಕ ಚುನಾವಣಾ ಆಯೋಗಕ್ಕೆ ಪೂರಕವಾಗಿ ಪಕ್ಷ ಕೆಲಸ ಮಾಡಲಿದೆ. ಅಭಿಯಾನ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ಇದೇ ರೀತಿ ಜಿಲ್ಲಾ ತಂಡಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಶೀಘ್ರದಲ್ಲಿ ಪ್ರತಿ ಗ್ರಾಮಕ್ಕೆ ಬಿಎಲ್ 2ಗಳನ್ನು ನೇಮಕ ಮಾಡಲಾಗುವುದು. ಮತದಾರರ ಗುರುತಿನ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಡಿಲೀಟ್ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಲಾಗುವುದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಸೆ.17ರಂದು ಮನೆ ಮನೆಗೆ ತೆರಳಿ ಅಭಿಯಾನ ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಲು ದೇಶದ ಎಲ್ಲರೂ ಮತದಾನ ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಕರೆ ನೀಡಿದರು.
ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿ ಇರುವುದಿಲ್ಲ. ಇಂಥವರಿಗೆ ಅಗತ್ಯ ಮಾಹಿತಿಯನ್ನು ಬಿಎಲ್‌ಎಗಳು ಕೊಡಲಿದ್ದಾರೆ. ಅಲ್ಲದೆ, ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ನಿಧನರಾದವರ ಹೆಸರು ಡಿಲೀಟ್, ನಕಲಿ ಮತದಾರರ ಗುರುತಿಸುವ ಕಾರ್ಯವನ್ನು ಸಹ ಬಿಜೆಪಿ ವತಿಯಿಂದ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.
ಸಮರ್ಪಕ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಈಗ ಚುನಾವಣಾ ಆಯೋಗವು ಕಾರ್ಯನಿರತವಾಗಿದ್ದು, ಬಿಜೆಪಿ ಇದಕ್ಕೆ ನೆರವಾಗಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….