ದೊಡ್ಡಬಳ್ಳಾಪುರ, (ಸೆ.03): ನಮ್ಮೂರಿನ ಕೃಷಿ ಭೂಮಿ ಕೈಗಾರಿಕೋದ್ಯಮಿಗಳ ಪಾಲಾಗದೇ ಉಳಿಸುವಂತೆ ದಿನ್ನೆ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಮನವಿ ಪತ್ರವನ್ನು ಇಟ್ಟು ನಾಗದೇನಹಳ್ಳಿ ಹಾಗೂ ಆದಿನಾರಾಯಣಹೊಸಹಳ್ಳಿ ಭೂ ಸ್ವಾಧೀನ ಹೋರಾಟ ಸಮಿತಿ ಸದಸ್ಯರು ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಗ್ರಾಮದ ಮುಖಂಡರಾದ ನಾಗರಾಜ್, ಚಂದ್ರಪ್ಪ, ಕೃಷ್ಣಪ್ಪ, ಆನಂದ್, ಹನುಮೇಗೌಡ, ಆನಂದಮ್ಮ, ನೈಸರ್ಗಿಕ ಕಾನೂನುಗಳ ಪ್ರಕಾರ ಬರಡು ಭೂಮಿ ಅಥವಾ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ನೀಡಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. ಆದರೆ ಭ್ರಷ್ಟ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಕೈಗಾರಿಕೋದ್ಯಮಿಗಳಿಗೆ ಲಾಭ ಮಾಡುವ ಸಂಚಿನಲ್ಲಿ ತಮ್ಮ ಸ್ವ ಹಿತಾಸಕ್ತಿ ಹಾಗೂ ದೊಡ್ಡ ಮೊತ್ತದ ಹಣದ ಆಮಿಷಕ್ಕೆ ಬಲಿಯಾಗಿ ಫಲವತ್ತಾದ ಕೃಷಿ ಭೂಮಿಯನ್ನು ಕಸಿಯುವುದಕ್ಕೇ ಮುಂದಾಗಿದ್ದಾರೆ. ಇದನ್ನು ನಿಲ್ಲಿಸುವವರೆಗು ನಮ್ಮ ಹೋರಾಟವನ್ನು ದೇವನಹಳ್ಳಿ ತಾಲ್ಲೂಕಿನ ಚನ್ನಾರಾಯಪಟ್ಟಣದ ರೈತರು ನಡೆಸುತ್ತಿರುವ ಹೋರಾಟದಲ್ಲಿ ವಿಲೀನಗೊಳಿಸಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದಿದ್ದಾರೆ.
ಜನವಸತಿಗೆ ಮೀಸಲಿಟ್ಟ ಪಟ್ಟಣ ಪಂಚಾಯಿತಿಗೆ ಸೇರಿದ ಹಾಗೂ ಸುಮಾರು 12,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಗೀತಂ ವಿಶ್ವವಿದ್ಯಾಲಯದ ಪಕ್ಕದಲ್ಲಿ ಇರುವ ನಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಆರೋಪಿಸಿದರು.
ಕೊನಘಟ್ಟ ಗ್ರಾಮದ ರೈತರೊಬ್ಬರು ಇತ್ತೀಚೆಗೆ ಭೂಸ್ವಾಧೀನದ ನೋಟಿಸ್ ಕೈಯಲ್ಲಿಯೇ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಯಾವುದನ್ನು ಲೆಕ್ಕಿಸದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸರ್ವಾಧಿಕಾರಿ ಬ್ರಿಟಿಷ್ ಆಳ್ವಿಕೆಯ ರೀತಿಯಲ್ಲಿ ರೈತರೊಂದಿಗೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೆಪ್ಟಂಬರ್ 6 ರಂದು ದೇವನಹಳ್ಳಿ ನಗರದಲ್ಲಿ ನಡೆಯುವ ಬೃಹತ್ ರೈತ ಹೋರಾಟದಲ್ಲಿ ನಾಗದೇನಹಳ್ಳಿ ಮತ್ತು ಆದಿ ನಾರಾಯಣ ಹೊಸಹಳ್ಳಿ ಗ್ರಾಮಗಳ ರೈತರು ಭಾಗವಹಿಸುವ ಮೂಲಕ ಹೋರಾಟವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….