ದೊಡ್ಡಬಳ್ಳಾಪುರ, (ಸೆ.04): ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಉಂಟಾಗಿರುವ ಬೆಳೆನಷ್ಟ, ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳಲ್ಲಿ ರೈತರು ಸೌಲಭ್ಯಗಳಿಗಾಗಿ ಅಲೆದಾಡುವಂತೆ ಆಗಿರುವುದು, ಯೂರಿಯಾ ರಸಗೊಬ್ಬರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ತಹಶೀಲ್ದಾರ್ ವಿದ್ಯಾವಿಭಾ ರಾಠೋಡ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ, ಮುಖಂಡರಾದ ಸತೀಶ್, ಉಮಾದೇವಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ಸರ್ಕಾರಿ ಸೌಲಭ್ಯಗಳು ಕಲವೇ ಮಂದಿ ಪ್ರಭಾವಿಗಳಿಗೆ ದೊರೆಯುತ್ತಿವೆ. ಸರ್ಕಾರಿ ಸೌಲಭ್ಯಗಳ ಕುರಿತಂತೆ ಸೂಕ್ತ ಪ್ರಚಾರ ಹಾಗೂ ಪಾರದರ್ಶಕತೆ ಪಾಲಿಸುತ್ತಿಲ್ಲ.
ತಾಲ್ಲೂಕಿನಲ್ಲಿ ಮಳೆ ಇಲ್ಲದೆ ರಾಗಿ ಮೊಳಕೆ ಬಾರದೆ ಒಣಗಿ ಹೋಗಿದೆ. ಈಗ ಮಳೆಯಾಗಿದೆ ಇರುವ ಬೆಳೆಗೆ ಹಣ ನೀಡಿದರು ಸಹ ಯೂರಿಯಾ ದೊರೆಯದಾಗಿದೆ. ಕೆಲವರು ದುಬಾರಿ ಬೆಲೆಗೆ ಯೂರಿಯಾ ಮಾರಾಟ ಮಾಡುತ್ತಿದ್ದರು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಬಗರ್ ಹುಕ್ಕುಂ ಅಡಿಯಲ್ಲಿ ಇನ್ನು ಸಾಕಷ್ಟು ಅರ್ಜಿಗಳು ವಿತರಣೆಯಾಗದೆ ಭಾಕಿ ಉಳಿದುಕೊಂಡಿವೆ. ಈ ಹಿಂದೆ ಸಾಗುವಳಿ ಚೀಟಿ ಪಡೆದಿರುವ ರೈತರ ಭೂಮಿ ಪೋಡಿಯಾಗದೆ ಸರ್ಕಾರದ ಸೌಲಭ್ಯ ಪಡೆಯಲು ಹಾಗೂ ತಮ್ಮ ಭೂಮಿ ಇಂತಹದ್ದೇ ಕಡೆ ಬರುತ್ತದೆ ಎನ್ನುವುದು ತಿಳಿಯದೆ ರೈತರು ಭೂಮಿ ಇದ್ದೂ ಸಹ ಅಭಿವೃದ್ಧಿ ಮಾಡಲಾಗದೆ ಪೋಡಿ ಮಾಡಿಕೊಡುವಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ತಾಲ್ಲೂಕು ಕಚೇರಿಗೆ ಅಲೆದಾಡುವಂತಾಗಿದೆ.
ಸರ್ವೇ ಇಲಾಖೆಯಲ್ಲಿನ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು. ನಗರದ ಕಿರಿದಾದ ಸ್ಥಳದಲ್ಲಿ ಇರುವ ಹೂ ಹರಾಜು ಸ್ಥಳವನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಬೇಕು. ಎಪಿಎಂಸಿಯಲ್ಲಿ ಹೂವು ಮಾರಾಟಕ್ಕೆ ಅಗತ್ಯ ಇರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಹೆಗ್ಗಡಿಹಳ್ಳಿ ಗ್ರಾಮದ ರೈತ ಮಖಂಡ ಮುನಿನಾರಾಯಣಪ್ಪ ಮಾತನಾಡಿ, 15 ದಿನಗಳಿಂದ ಪ್ರತಿ ದಿನ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಗೃಹ ಬಳಕೆಯ ವಿದ್ಯತ್ ಸಹ ಕಡಿತ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಾಗೂ ಹೊಲಗಳಲ್ಲಿ ಕೆಲಸ ಮಾಡಿ ಬರುವ ರೈತ ಮಹಿಳೆಯರು ಸಂಜೆ ವೇಳೆ ಕತ್ತಲಿನಲ್ಲೇ ಅಡುಗೆ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು.
ಪಾಲನಜೋಗಹಳ್ಳಿ ಕೋಡಿ ನೀರು ಹರಿದು ಹೋಗುವ ರಾಜಕಾಲುವೆಯನ್ನು ಒತ್ತುವರಿ ಮಾಡಿ ನೀರಿನ ಸಹಜ ಹರಿವಿಗೆ ಅಡ್ಡಿಯಾಗುವಂತೆ ಪೈಪ್ಲೈನ್ ಹಾಕುವ ಮೂಲಕ ಬೃಹತ್ ಕಟ್ಟಡ ಕಟ್ಟಲಾಗುತ್ತಿದೆ. ಹೆದ್ದಾರಿ ಬದಿಯಲ್ಲೇ ಕಾಮಗಾರಿ ನಡೆಯುತ್ತಿದ್ದರು ಸಹ ಕಂದಾಯ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಖಂಡನೀಯ. ಇದೇ ಕೆಲಸವನ್ನು ಸಾಮಾನ್ಯ ರೈತರು ಮಾಡಿದರೆ ಮಾತ್ರ ಅಧಿಕಾರಿಗಳು ನೋಟಿಸ್ ನೀಡುತ್ತಾರೆ. ಇವರ ವಿರುದ್ಧವು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಬಚ್ಚಹಳ್ಳಿ ಆರ್.ಸತೀಶ್ ಒತ್ತಾಯಿಸಿದರು.
ರೈತರ ಪ್ರಶ್ನೆಗಳಿಗೆ ಇಲಾಖಾ ಅಧಿಕಾರಿಗಳಿಂದ ಉತ್ತರ ಪಡೆದು ಸಭೆಗೆ ನೀಡಿದ ತಹಶೀಲ್ದಾರ್ ವಿದ್ಯಾವಿಭಾ ರಾಠೋಡ್, ಎಪಿಎಂಸಿ ಆವರಣದಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿಕೊಡುವವರೆಗೂ ಅಲ್ಲಿನ ರೈತ ಭವನವನ್ನು ರೈತರು ಬಳಸಿಕೊಳ್ಳಬಹುದು. ವ್ಯಾಪಾರಿಗಳೆಲ್ಲರು ಎಪಿಎಂಸಿ ಆವರಣಕ್ಕೆ ಬರುವಂತೆ ಸೂಚಿಸಲಾಗುವುದು. ಕೃಷಿ, ತೋಟಗಾರಿಕೆ ಇಲಾಖೆಯಲ್ಲಿನ ಸೌಲಭ್ಯಗಳ ಹಂಚಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪಾರದರ್ಶಕತೆಯನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಪೋಡಿ ಸಮಸ್ಯೆ ಇಡೀ ರಾಜ್ಯದಲ್ಲಿ ಇದೆ. ಈ ಸಮಸ್ಯೆಗೆ ಸರ್ಕಾರದ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಿದೆ. ಸ್ಥಳೀಯ ಮಟ್ಟದ ಅಧಿಕಾರಿಗಳು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ವಿದ್ಯುತ್ ಉತ್ಪಾದನೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕಡಿತ ಅನಿವಾರ್ಯವಾಗಿದೆ. ಈಗ ಮಳೆಯಾಗುತ್ತಿರುವುದರಿಂದ ಒಂದೆರಡು ದಿನಗಳಲ್ಲಿ ವಿದ್ಯುತ್ ಕಡಿತದ ಸಮಸ್ಯೆ ಪರಿಹಾರವಾಗಲಿದೆ ಎಂದರು.
ರಾಜಕಾಲುವೆ ಒತ್ತುವರಿ ಸೇರಿದಂತೆ ತಾಲ್ಲೂಕಿನ ಸರ್ಕಾರಿ ಭೂಮಿ, ಗೋಮಾಳದ ಎಲ್ಲಾ ರೀತಿಯ ಒತ್ತುವರಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಶೀಘ್ರದಲ್ಲೇ ತೆರವು ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದರು.
ಪ್ರತಿಭಟನೆ: ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸದೆ ಕುಂದು ಕೊರತೆ ಸಭೆಯನ್ನು ಅರ್ಧಕ್ಕೆ ಮೊಟುಕುಗೊಳಿಸಿ ಹೊರನಡೆದ ತಹಶೀಲ್ದಾರ್ ವಿದ್ಯಾವಿಭಾ ರಾಠೋಡ್ ಅವರ ರೈತ ವಿರೋಧಿ ಧೋರಣೆ ಖಂಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಧಿಕ್ಕಾರ ಕೂಗುವ ಮೂಲಕ ತಾಲ್ಲೂಕು ಕಚೇರಿ ಸಭಾಂಗಣದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳಲ್ಲಿ ರೈತರ ಕೆಲಸಗಳು ಸೂಕ್ತ ರೀತಿಯಲ್ಲಿ ನಡೆಯದೇ ಇರುವುದು ಹಾಗೂ ಭ್ರಷ್ಟಾಚಾರದ ಬಗ್ಗೆ ಸಭೆ ಕರೆಯುವಂತೆ ರೈತರು ಸಲ್ಲಿಸಲಾಗಿದ್ದ ಸಭೆಗೆ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಿ ಆಹ್ವಾನಿಸಿರುವ ತಹಶೀಲ್ದಾರ್ ಅವರೇ ತಾಳ್ಮೆಯಿಂದ ಕುಳಿತು ಸಮಸ್ಯೆಗಳನ್ನು ಆಲಿಸುವ ಕನಿಷ್ಠ ಸೌಜನ್ಯವನ್ನು ತೋರಿಸಿಲ್ಲ ಎಂದು ಆರೋಪಿಸಿದರು.
ತಹಶೀಲ್ದಾರ್ ಅವರಿಗೆ ಪ್ರಿಯವಾಗುವಂತೆ ಕೇಳುವ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡುತ್ತ ರೈತರು ಪ್ರತಿ ನಿತ್ಯ ಕಂದಾಯ ಇಲಾಖೆಯ ಕಚೇರಿಗಳಲ್ಲಿ ಅನುಭವಿಸುತ್ತಿರುವ ಕಷ್ಟಗಳನ್ನು ಹೇಳುತ್ತಿದ್ದಂತೆ ಸಭೆಯನ್ನೇ ಮೊಟಕುಗೊಳಿಸಿ ಹೊರನಡೆದಿದ್ದಾರೆ.
ಒಂದು ವಾರದ ಒಳಗೆ ಮತ್ತೆ ರೈತರ ಸಭೆ ಕರೆದು ನಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಸದೇ ಇದ್ದರೆ ತಾಲ್ಲೂಕು ಕಚೇರಿಗೆ ಬೀಗಿ ಜಡಿಯಲಾಗುವುದು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಕೆ.ಪರಮೇಶ, ಗ್ರೇಡ್-2 ತಹಶೀಲ್ದಾರ್ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಕೆ.ಸುಲೋಚನಮ್ಮ, ಮುತ್ತೇಗೌಡ, ವಾಸುದೇವ್, ಪ್ರಕಾಶ್, ಶಿರವಾರರವಿ ಸಭೆಯಲ್ಲಿ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….