ಹುಬ್ಬಳ್ಳಿ, (ಸೆ.05): ಬಿಜೆಪಿಯಲ್ಲಿ ಬಕೆಟ್ ಹಿಡಿದವರಿಗೆ ಟಿಕೆಟ್ ಕೊಡುತ್ತಾರೆ ಎಂದು ಕಿಡಿಕಾರಿದ್ದ ಪ್ರದೀಪ್ ಶೆಟ್ಟರ್ ಬೆಂಬಲಕ್ಕೆ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಧಾವಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಯಾರ ಬಕೆಟ್ ಹಿಡಿದು ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಬಿಜೆಪಿ ಟಿಕೆಟ್ ಗಿಟ್ಟಿಸಿದರು ಅನ್ನುವುದು ಎಲ್ಲರಿಗೂ ಗೊತ್ತು ಎಂದು ಪೋಸ್ಟ್ ಮಾಡುವ ಮೂಲಕ ಶಾಸಕ ಮಹೇಶ್ ಟೆಂಗಿನಕಾಯಿ ಅವರಿಗೆ ಟಾಂಗ್ ನೀಡಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದಾಗಲೂ ಸಹ ಮೌನ ಮುರಿಯದಿದ್ದ ಸಂಕಲ್ಪ ಶೆಟ್ಟರ್ ಈಗ ಮಹೇಶ್ ಟೆಂಗಿನಕಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಬಿಎಲ್ ಅವರ ಗೊಂಬೆ ಎಂದು ಹ್ಯಾಷ್ ಟ್ಯಾಗ್ ಹಾಕುವ ಮೂಲಕ, ಮಹೇಶ್ ಟೆಂಗಿನಕಾಯಿ ಬಿ ಎಲ್ ಸಂತೋಷ್ ಅವರ ಗೊಂಬೆ ಎಂದು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.
ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದ ಪ್ರದೀಪ್ ಶೆಟ್ಟರ್ ಮಾಧ್ಯಮಗಳೊಂದಿಗೆ 15 ದಿನ ಕಾದು ನೋಡಿ ಎಂದು ನಿಗೂಢವಾಗಿ ನುಡಿದಿದ್ದರು. ಜೊತೆಗೆ ಬಿಜೆಪಿ ವಿರುದ್ಧ ಸಾಲು ಸಾಲು ಹೇಳಿಕೆ ನೀಡಿದ್ದರು, ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಜಗದೀಶ್ ಶೆಟ್ಟರ್ ಪ್ರದೀಪ್ ಕಾಂಗ್ರೆಸ್ ಸೇರುವ ವಿಚಾರ ನನಗೆ ಗೊತ್ತಿಲ್ಲ. ಅವರು ನನ್ನೊಡನೆ ಸಂಪರ್ಕದಲ್ಲಿಲ್ಲ, ಆದರೆ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಬಯಸುತ್ತಿರುವುದಂತೂ ನಿಜ ಎಂದು ಹೇಳಿದ್ದರು.
ಇತ್ತೀಚೆಗೆ ಜಗದೀಶ್ ಶೆಟ್ಟರ್ ಹೇಳಿಕೆಗಳು ಬಿಜೆಪಿ ನಾಯಕರಿಗೆ ಬಿಸಿ ತುಪ್ಪದಂತಾಗಿದ್ದು, ಅವರ ಕೌಂಟರ್‌ಗಳಿಗೆ ತತ್ತರಿಸಿದ್ದಾರೆ. ಇದರ ಬೆನ್ನಲ್ಲೇ ಶೆಟ್ಟಿಯವರು ಪುತ್ರ ಕಣಕ್ಕಿಳಿದಿರುವುದು ಬಿಜೆಪಿ ಮುಖಂಡರಿಗೆ ನುಂಗಲಾರದ ತುತ್ತಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….