ಬೈಕ್ ಸವಾರರೆ ಎಚ್ಚರ: ಬೇಕಾಬಿಟ್ಟಿ ನಿಲ್ಲಿಸಿದ್ದ ವಾಹನಗಳ ವಶಕ್ಕೆ ಪಡೆದ ಪೊಲೀಸರು…!! / ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರೆಂದು ಆಕ್ಷೇಪ

ದೊಡ್ಡಬಳ್ಳಾಪುರ, (ಸೆ.05): ಒಂದೆಡೆ ರಸ್ತೆ ಬದಿ ಅಂಗಡಿಗಳ ತೆರವಿನ‌ ಬಿಸಿ ಬೆನ್ನಲ್ಲೇ, ನಗರ ಠಾಣೆ ಪೊಲೀಸರು ಬೇಕಾಬಿಟ್ಟಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಈ ಕುರಿತು ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ನಗರದ ಸೌಂದರ್ಯ ಮಹಲ್ ಮುಂಭಾಗದಲ್ಲಿನ ಬ್ಯಾಂಕ್ ಸಮೀಪದ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳನ್ನು ತೆರವು ಮಾಡುವಂತೆ ಸೂಚನೆ ನೀಡಿದರು. ಆದಾಗ್ಯೂ ತೆರವು ಮಾಡದ ವಾಹನಗಳನ್ನು ಟೆಂಪೋಗಳಲ್ಲಿ ತುಂಬಿಕೊಂಡು ತೆರಳಿದರು.

ದೂರು: ದೊಡ್ಡಬಳ್ಳಾಪುರ ನಗರ ಸೌಂದರ್ಯ ಮಹಲ್’ ಸಿನಿಮಾ ಮಂದಿರ ವೃತ್ತದಿಂದ ಅಂದರೆ ಹೆಚ್.ಡಿ.ಎಫ್.ಸಿ.ಬ್ಯಾಂಕ್ (ವಿ.ಟಿ.ಅರ್ಕೇಡ್) ಮುಂಭಾಗದಿಂದ ಶೆಣೀಗರಪೇಟೆ ಮತ್ತು ಚಿಕ್ಕಪೇಟೆಗೆ ಪ್ರವೇಶಿಸುವ ಸಾರ್ವಜನಿಕ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ವಾಹನಗಳನ್ನು ರಸ್ತೆಯ ಉದ್ದಗಲಕ್ಕೂ ನಿಲ್ಲಿಸುತ್ತಾ ರಸ್ತೆಯನ್ನು ಸಂಪೂರ್ಣವಾಗಿ ಅತಿಕ್ರಮಿಸಿ ಬಂದ್ ಮಾಡಿರುವ ಆರೋಪ ಕೇಳಿಬಂದಿತ್ತು.

ಈ ಪ್ರಮುಖ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಅಲ್ಲದೆ ಈ ಬಡಾವಣೆಯಲ್ಲಿ ವಾಸವಾಗಿರುವ ನಿವಾಸಿಗಳು. ವೃದ್ಧರು, ಶಾಲಾ ಮಕ್ಕಳು ಓಡಾಡುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂಬುದು ಬಹು ದಿನಗಳ ಆಕ್ರೋಶ.

ದೊಡ್ಡಬಳ್ಳಾಪುರದ ಹೃದಯಭಾಗದ ಡಾ.ರಾಜ್‌ ಕುಮಾರ್ ಕಲಾಮಂದಿರ ಆವರಣದಲ್ಲಿ ಹಾಗೂ KSRTC ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಅವಕಾಶವಿದ್ದರೂ ಸಹ ಸಾರ್ವಜನಿಕರು ತಮ್ಮ ವಾಹನಗಳನ್ನು ಚಿಕ್ಕಪೇಟೆ ಪ್ರವೇಶಿಸುವ ಮುಖ್ಯರಸ್ತೆಯಲ್ಲಿ ನಿಲ್ಲಿಸಿರುತ್ತಾರೆ ಎಂಬುದು ಆಕ್ಷೇಪಕ್ಕೆ ಕಾರಣವಾಗಿದೆ.

ಈ ಕುರಿತಂತೆ ತುರ್ತಾಗಿ ಕ್ರಮ ಕೈಗೊಂಡು ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸುವುದನ್ನು ತೆರವುಗೊಳಿಸಿ, ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ, ಹಾಗೂ ಬಡಾವಣೆಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಶೇಣಿಗರಪೇಟೆ ಮತ್ತು ಚಿಕ್ಕಪೇಟೆ ಬಡಾವಣೆಯ ನಾಗರೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. 

ಆಕ್ಷೇಪ: ಪೊಲೀಸರ ಈ ಕ್ರಮಕ್ಕೆ ವಾಹನ ಸವಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಸಾವಿರಾರು ಮಂದಿ ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಮತ್ತಿತರರು ವಾಣಿಜ್ಯ ಮಳಿಗೆಗಳು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ ಇರುವುದು ಅವರ ವೈಪಲ್ಯವೇ ಹೊರತು ಸಾರ್ವಜನಿಕರದ್ದಲ್ಲ‌. ವೃದ್ದ ಗ್ರಾಹಕರನ್ನು ಕರೆತಂದಾಗ ಅನಿವಾರ್ಯವಾಗಿ ಬ್ಯಾಂಕ್ ಮುಂದೆ ನಿಲ್ಲಿಸಬೇಕಾಗುತ್ತದೆ.

ಈ  ಕುರಿತಂತೆ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದವರ ವಿರುದ್ಧ ಕ್ರಮಕೈಗೊಳ್ಳಬೇಕು. ಅದು ಬಿಟ್ಟು ದೂರದೂರಿಂದ ಬರುವ ಅಮಾಯಕ ದ್ವಿಚಕ್ರ ವಾಹನ ಮಾಲೀಕರಿಗೆ ತೊಂದರೆ ಮಾಡುವುದು, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!