ಶ್ರೀ ಸೂರ್ಯ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು – ಎಸ್.ಮಹಾಬಲೇಶ್ವರ್

ದೊಡ್ಡಬಳ್ಳಾಪುರ, (ಸೆ.05): ದೇಶದ ಪ್ರಗತಿ ಅಳೆಯಬೇಕಾದರೆ ಜ್ಞಾನ ಸಂಪತ್ತು ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಈ ದಿಸೆಯಲ್ಲಿ ಅರಿವಿನೊಂದಿಗೆ ನೈತಿಕತೆ ಮೂಡಿಸಿಕೊಳ್ಳುವುದರೊಂದಿಗೆ ಶಿಕ್ಷಕರು ತಮ್ಮ ಮೇಲಿಟ್ಟಿರುವ ಗೌರವ ಘನತೆಗೆ ದಕ್ಕೆ ಬಾರದಂತೆ ನಡೆದುಕೊಳ್ಳಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲ ಎಸ್.ಮಹಾಬಲೇಶ್ವರ್ ಹೇಳಿದರು.

ನಗರದ ಬೆಸೆಂಟ್ ಪಾರ್ಕ್ ರಸ್ತೆಯಲ್ಲಿನ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು, ಶ್ರೀ ರಾಮ ನರ್ಸಿಂಗ್ ಕಾಲೇಜು ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಭವಿಷ್ಯ ರೂಪಿಸಿಕೊಂಡವರು ಒಂದಲ್ಲ ಒಂದು ರೀತಿ ತಮ್ಮ ಸಾಧನೆಗೆ ದಾರಿದೀಪವಾದ ಶಿಕ್ಷಕರನ್ನು ಸ್ಮರಿಸುತ್ತಾರೆ. ಇಂದು ಮಾಹಿತಿ ಪಡೆಯಲು ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಮೊದಲಾದ ಹಲವಾರು ವಿಧಾನಗಳಿವೆ. ಆದರೆ ವಿಷಯವನ್ನು ಅರ್ಥ ಮಾಡಿಸಲು ಹಾಗೂ ಉತ್ತಮ ದಾರಿಯಲ್ಲಿ ನಡೆಯಲು ಶಿಕ್ಷಕರ ಅವಶ್ಯಕತೆ ಇದೆ. 

ಶಿಕ್ಷಕರು ತಮಗೆ ಆಸಕ್ತಿಯಿರುವ ವಿಷಯದ ಬಗ್ಗೆ ಹೆಚ್ಚಿನ ಜ್ಞಾನ, ಸಾಮಾನ್ಯ ಜ್ಞಾನ ಹಾಗೂ ಉತ್ತಮ ನಡುವಳಿಕೆ ಮೂಡಿಸಿಕೊಂಡಾಗ ಮಾತ್ರ ತಮ್ಮ ವೃತ್ತಿಗೆ ನ್ಯಾಯ ಸಲ್ಲಿಸಿದಂತಾಗುತ್ತದೆ. ಇದನ್ನೇ ವಿದ್ಯಾರ್ಥಿಗಳು ಸಹ ಅನುಸರಿಸುತ್ತಾರೆ. 

ಶೀಲವಿಲ್ಲದ ಶಿಕ್ಷಣದಿಂದ ಯಾವುದೇ ಪ್ರಯೋಜನವಲ್ಲ. ಒಂದು ಸರ್ಕಾರವನ್ನು ಬದಲಿಸುವ ಶಕ್ತಿ ಇರುವ ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ತರುವ ಸಾಮಥ್ರ್ಯ ಶಿಕ್ಷಕರಿಗಿದ್ದು, ಶಿಕ್ಷಕರಾಗಿ ರಾಷ್ಟ್ರದ ಅತ್ಯುನ್ನತ ರಾಷ್ಟ್ರಪತಿ ಪದವಿಗೇರಿದ ಸರ್ವಪಲ್ಲಿ ರಾಧಾಕೃಷ್ಣನ್ ಮಾದರಿಯಾಗಬೇಕು. ತಮ್ಮ ಗುರಿಯ ಸಾಧನೆಗೆ ಪೂರಕವಾಗಿ ಎಲ್ಲರೂ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಕಿವಿ ಮಾತು ಹೇಳಿದರು.

ಸೂರ್ಯ ಎಜುಕೇಷನ್ ಟ್ರಸ್ಟ್‍ನ ಗೌರವ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯ ಕುಮಾರ್ ಮಾತನಾಡಿ, ಇಂದು ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗಳಾಗುತ್ತಿದ್ದರೂ ಶಿಕ್ಷಕರ ಮಾರ್ಗದರ್ಶನದಲ್ಲಿ ಪಡೆಯುವ ವಿದ್ಯೆ ಚಿರಕಾಲ ಉಳಿಯುತ್ತದೆ.ಜ್ಞಾನದ ವಿಸ್ತಾರಕ್ಕೆ ಎಡೆಯಿಲ್ಲ. ಶಿಕ್ಷಕರ ಜ್ಞಾನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಸುಜ್ಞಾನ ದೀಪಿಕಾ ಜಾಗೃತಿ ಸಂಚಾಲಕರಾದ ಎಂ.ಎಸ್.ಮಂಜುನಾಥ್, ಉಪನ್ಯಾಸಕರಾದ ರವಿಕಿರಣ್, ಅನಿಲ್ ಕುಮಾರ್, ಪ್ರಶಾಂತ್, ಮುಖಂಡರಾದ ಕೃಷ್ಣಪ್ಪ, ಮೌಲಾ ಸಾಬ್, ಮಿಥನ್ ಕಿಚ್ಚ ಮೊದಲಾದವರು ಭಾಗವಹಿಸಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!