ದೊಡ್ಡಬಳ್ಳಾಪುರ, (ಸೆ.07): ಅಪಘಾತದಲ್ಲಿ ತಂದೆ- ಮಗಳ ಪ್ರಾಣಹಾನಿ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಆದೇಶ, ಕರವೇ ಪ್ರವೀಣ್ ಶೆಟ್ಟಿ ಬಣ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ರಸ್ತೆ ಬದಿ ಅಂಗಡಿಗಳ ತೆರವಿಗೆ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದರಿಂದಾಗಿ ರಸ್ತೆ ಬದಿಗಳಲ್ಲಿ ಕಾಫಿ-ಟೀ ಅಂಗಡಿ, ತರಕಾರಿ ಅಂಗಡಿ, ಹೋಟೆಲ್, ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಹೀಗೆ ಸಣ್ಣಪುಟ್ಟ ಜಾಗದಲ್ಲಿ ಅಂಗಡಿಗಳನ್ನಿಟ್ಟುಕೊಂಡು ಜೀವನ ರೂಪಿಸಿಕೊಂಡಿದ್ದ ಹಲವಾರು ಮಂದಿ ಹಲವು ಕುಟುಂಬಗಳು ಬೀದಿಗೆ ಬಂದಿದ್ದು, ಅಂತವರಿಗೆ ನಗರಸಭೆ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವಂತೆ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು, ಏಕಾಏಕಿ ಬೀದಿ ಬದಿ ಅಂಗಡಿಗಳ ತೆರವಿನಿಂದ ಜೀವನ ರೂಪಿಸಿಕೊಂಡಿದ್ದ ಹಲವಾರು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಪಘಾತಕ್ಕೆ ಕಾರಣವಾಗುತ್ತಿದ್ದ ಕಾರಣ ತೆರವು ಮಾಡುವುದು ಒಳಿತೆ ಆದಾಗ್ಯೂ, ಜೀವನ ಕಳೆದುಕೊಂಡು ಬೀದಿಗೆ ಬಂದಿರುವ ಬಡ ವ್ಯಾಪಾರಿಗಳಿಗೆ ಮತ್ತೆ ಬೇರೆ ಸ್ಥಳದಲ್ಲಿ ಅವಕಾಶ ಕಲ್ಪಿಸಬೇಕಿರುವುದು ಎಲ್ಲರ ಜವಬ್ದಾರಿ.
ಅಪಘಾತಕ್ಕೆ ಕೇವಲ ಬೀದಿ ಬದಿ ಅಂಗಡಿಗಳನ್ನೆ ಹೊಣೆ ಮಾಡುವುದು ಬೇಸರದ ಸಂಗತಿ, ಅತಿವೇಗ, ರಸ್ತೆ ಸರಿ ಇಲ್ಲದೆ ಇರುವುದು ಸಹ ಕಾರಣ, ಈ ನಿಟ್ಟಿನಲ್ಲಿ ಪೊಲೀಸ್, ಲೋಕೋಪಯೋಗಿ ಇಲಾಖೆ ಸೂಕ್ತ ಗಮನ ಹರಿಸಬೇಕಿದೆ.
ಉಳಿದಂತೆ ಬಮೂಲ್ ಕೇಂದ್ರಗಳನ್ನು ತೆರವು ಮಾಡುವ ಮುನ್ನ ಕಚೇರಿಗೆ ಮಾಹಿತಿ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಲ್ಲದೆ ತ್ವರಿತವಾಗಿ ಅಂಗಡಿಗಳನ್ನು ಕಳೆದುಕೊಂಡ ಬಡವರಿಗೆ ಸೂಕ್ತ ಸರ್ಕಾರಿ ಜಾಗದಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕೆಂದು ಆನಂದ್ ಕುಮಾರ್ ಅವರು ನಗರಸಭೆ ಆಡಳಿತ ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….