ನವದೆಹಲಿ (ಸೆ.7): ಸನಾತನ ಧರ್ಮದ ಮೇಲೆ ಈ ಹಿಂದೆ ಹಲವಾರು ದಾಳಿಗಳು ನಡೆದರು ಯಾವುದೇ ಹಾನಿಯನ್ನುಂಟು ಮಾಡಲು ಸಾಧ್ಯವಾಗಿಲ್ಲ. ಮತ್ತು ಯಾವುದೇ ಶಕ್ತಿಯ ಹಸಿದ “ಪರಾವಲಂಬಿ ಜೀವಿಗಳಿಂದ” ಇಂದು ಕೂಡ ಹಾನಿಯಾಗುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.
ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದ ಕುರಿತು ಅವರು ಈ ಹೇಳಿಕೆ ನೀಡಿದ್ದಾರೆ.
ಇಡೀ ದೇಶವೀಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಸರ್ಕಾರವನ್ನು ಟೀಕಿಸಲು ಅವರಿಗೆ ಬೇರೆ ಯಾವ ವಿಚಾರಗಳೂ ಸಿಗುತ್ತಿಲ್ಲ. ಅದಕ್ಕಾಗಿ ಸನಾತನ ಧರ್ಮದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ದೇಶ ಅಭಿವೃದ್ಧಿ ಆಗುತ್ತಿದ್ದರೆ, ಕೆಲವರಿಗೆ ಇದನ್ನು ಸಹಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸರಕಾರದ ಸಾಧನೆಗಳನ್ನು ದುರ್ಬಲಗೊಳಿಸಲು ಸನಾತನ ಧರ್ಮದ ವಿಚಾರವನ್ನು ಬೊಟ್ಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದರು. ಆದರೆ ರಾವಣನ ದುರಹಂಕಾರದಿಂದಲೂ ಬಾಬರ್ ಮತ್ತು ಔರಂಗಜೇಬನ ಕ್ರೌರ್ಯಗಳಿಂದಲೂ ಸನಾತನವನ್ನು ಅಳಿಸಲು ಸಾಧ್ಯವಾಗಿಲ್ಲ ಅನ್ನೋದನ್ನು ವಿರೋಧಿಸುವವರು ಮರೆತಿದ್ದಾರೆ. ಹೀಗಿರುವಾಗ ಈ ಕ್ಷುಲ್ಲಕರಿಗೆ ಸನಾತನವನ್ನು ಹೇಗೆ ನಾಶ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಜಗತ್ತಿನಲ್ಲಿ ಒಂದು ಸತ್ಯವಿದೆ. ಜನರು ತಮ್ಮ ಮೂರ್ಖತನದಿಂದ ಸೂರ್ಯನ ಮೇಲೆ ಉಗುಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಉಗುಳು ತಮ್ಮ ಮೇಲೆ ಬೀಳುತ್ತದೆ ಎಂದು ಅವರಿಗೆ ತಿಳಿದಿಲ್ಲ.
ರಾವಣ, ಹಿರಣ್ಯಕಶ್ಯಪ ಮತ್ತು ಕಂಸನಂಥವರು ದೈವಿಕ ಶಕ್ತಿಗೆ ಸವಾಲು ಹಾಕಿದ್ದರು. ಕೊನೆಗೆ ಅವರು ಎಲ್ಲವನ್ನೂ ಕಳೆದುಕೊಂಡರು. ಅವರ ಪಾಲಿಗೆ ಏನೂ ಉಳಿಯಲಿಲ್ಲ. ಆದರೆ, ಸನಾತನ ಧರ್ಮದ ದೇವರು ಉಳಿದುಕೊಂಡಿದ್ದಾನೆ ಮತ್ತು ಈಗಲೂ ಇದ್ದಾನೆ.ಸನಾತನ ಧರ್ಮವು ಸತ್ಯವಾಗಿದೆ ಮತ್ತು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದರು. ಉತ್ತರ ಪ್ರದೇಶ ಉತ್ತಮ ರಾಜ್ಯಗಳಲ್ಲಿ ಒಂದಾಗಿದೆ ಎಂದು ಯೋಗಿ ಹೇಳಿದರು. ಇದು ದೇವರ ಕೃಪೆ. ಸನಾತನ ಧರ್ಮ ಎದ್ದು ನಿಂತಾಗ ಅಯೋಧ್ಯೆ ಮತ್ತು ಕಾಶಿಯಲ್ಲಿ ರಾಮಮಂದಿರ ಏಳುತ್ತದೆ ಮತ್ತು ಈ ನಗರಗಳು ಬೆಳೆಯುತ್ತಲೇ ಇರುತ್ತದೆ ಎಂದಿದ್ದಾರೆ.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಸನಾತನ ಧರ್ಮ ಕುರಿತು ಚರ್ಚೆ ಆರಂಭವಾಗಿದೆ. ಸನಾತನ ಧರ್ಮವನ್ನು ಕೇವಲ ವಿರೋಧಿಸಬಾರದು ಅದನ್ನೂ ಸಂಪುರ್ಣವಾಗಿ ನಿರ್ಮೂಲನೇ ಮಾಡಬೇಕು ಎಂದು ಚೆನ್ನೈನಲ್ಲಿ ನಡೆದ ಸಮಾವೇಶದಲ್ಲಿ ಉದಯನಿಧಿ ಹೇಳಿದ್ದರು.
ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಅದನ್ನು ಅಳಿಸಬೇಕು. ಹಾಗೆಯೇ ನಾವು ಸನಾತನವನ್ನೂ ನಾಶಪಡಿಸಬೇಕು ಎಂದಿದ್ದರು.
ಅವರ ಹೇಳಿಕೆ ದಿನದಿಂದಲೂ ವ್ಯಾಪಕವಾಗಿ ದೇಶದಲ್ಲಿ ಇದರ ಬಗ್ಗೆ ಚರ್ಚೆಯಾಗಿದೆ. ಇದರ ಬೆನ್ನಲ್ಲಿಯೇ ಡಿಎಂಕೆಯ ಮತ್ತೊಬ್ಬ ನಾಯಕ ಎ.ರಾಜಾ ಕೂಡ ಇಂಥದ್ದೇ ಹೇಳಿಕೆ ನೀಡಿದ್ದಾರೆ. ಈ ವಿಚಾರದ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕರು ಆಕ್ರೋಶದ ಮಾತನಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….