ಮೈಸೂರು, (ಸೆ.08): ಯಾವುದೇ ಕಾರಣಕ್ಕೂ ಮಹಿಷ ದಸರಾ ಆಚರಣೆ ಮಾಡಲು ಬಿಡುವುದಿಲ್ಲ, ಆ ದಿನ ನಾನೇ ಮಹಿಷ ದಸರಾ ಆಚರಣೆ ಚಾಮುಂಡಿ ಬೆಟ್ಟದಲ್ಲಿನ ಮಹಿಷಾಸುರನ ಪ್ರತಿಮೆ ಮುಂದೆ ಇರುತ್ತೇನೆ. ಹೇಗೆ ಆಚರಣೆ ಮಾಡುತ್ತಾರೋ ನಾನೂ ನೋಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಜನ ಬರ್ತಾರೆ. ಚಾಮುಂಡಿ ಬೆಟ್ಟಕ್ಕೆ ಜನ ಬರೋದು ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ, ತಾಯಿಯ ಆಶೀರ್ವಾದ ಪಡೆಯಲೇ ಹೊರತು ಬೇರೆಯದಕ್ಕಲ್ಲ. ಆಸ್ತಿಕರಿಗೆ ಅಂದರೆ ನಂಬಿಕಸ್ತರಿಗೆ ತಾಯಿ ಚಾಮುಂಡೇಶ್ವರಿ ಇದ್ದಾಳೆ. ಆಸ್ತಿಕತೆ ಇಲ್ಲದೆ ಇರೋರಿಗೆ ಮತ್ತೆ ಇನ್ಯಾರೋ ಇರಬಹದು.
ಅಂತವರು ಫೋಟೋ ಇಟ್ಟು ಮನೆಯಲ್ಲಿ ಪೂಜೆ ಮಾಡಿಕೊಳ್ಳಲಿ, ಅದರ ಜತೆ ಮಹಿಷನಂಥ ಮಗ ಹುಟ್ಟಲಿ ಅಂತ ಬೇಡಿಕೊಳ್ಳಲಿ. ಅದಕ್ಕೆ ತಕರಾರಿಲ್ಲ. ಆದರೆ, ಬೆಟ್ಟದಲ್ಲಿ ಮಹಿಷ ದಿನಾಚರಣೆಗೆ ಅವಕಾಶ ಕೊಡುವುದಿಲ್ಲ ಯಾರು ಇದನ್ನು ಮಹಿಷಾ ಬೆಟ್ಟ ಅಂತ ಹೇಳುವುದಿಲ್ಲ. ಇದನ್ನು ಚಾಮುಂಡಿಬೆಟ್ಟ ಅಂತಾನೇ ಕರೆಯುವುದು.
ನಾವು ದೇವರ ಮೇಲೆ ನಂಬಿಕೆ ಭಕ್ತಿ ಇರುವರು. ಈ ವಿಚಾರದಲ್ಲಿ ಯಾವುದೇ ಸಂಘರ್ಷಕ್ಕೆ ನಾನು ಸಿದ್ದ, ನಾನೇ ಮಹಿಷಾ ದಸರಾ ಅಚರಣೆ ದಿನ ಬೆಟ್ಟದಲ್ಲಿ ಇರುತ್ತೇನೆ.
ಯಾವುದೇ ಕಾರಣಕ್ಕೂ ಮಹಿಷಾ ದಸರಾ ಅಚರಣೆ ಮಾಡಲು ಬಿಡುವುದಿಲ್ಲ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ. ಅದರಲ್ಲೂ ಚಾಮುಂಡಿ ಬೆಟ್ಟದಲ್ಲಿ ಆಚರಣೆ ಮಾಡಲು ಬಿಡುವುದೇ ಇಲ್ಲ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….