ದೊಡ್ಡಬಳ್ಳಾಪುರ, (ಸೆ.13): ಭಾರತ ದೇಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸದೃಢದೊಂದಿದೆ ಸ್ಚಾವಲಂಬನೆಯಾಗಿದೆ ಎಂಬುದಕ್ಕೆ. ಚಂದ್ರಯಾನ 3 ಯಶಸ್ಸು ಸಾಕ್ಷಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ದಯಾನಂದ್ ತಿಳಿಸಿದರು.
ಅವರು ನಗರದ ಶ್ರೀ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಘಟಕಗಳು, ಲಯನ್ಸ್ ಕ್ಲಬ್ ಆರ್.ಎಲ್.ಜಾಲಪ್ಪ ಇನ್ಸ್ ಟಿಟ್ಯುಷನ್ಸ್ ಇವರ ಸಹಯೋಗದಲ್ಲಿ ಚಂದ್ರಯಾನ 3 ವಿಜ್ಞಾನಿಗಳ ತಂಡದ ಎನ್.ನರಸಿಂಹಮೂರ್ತಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ವಾವಲಂಬನೆಯಾಗಲು ಭಾರತೀಯ ವಿಜ್ಞಾನಿಗಳ ಪರಿಶ್ರಮ ಅಪಾರವಾಗಿದೆ. ಜಾಗತಿಕ ಮಟ್ಟದ ಪ್ರತಿಭೆಯನ್ನು ಹೊಂದಿರುವ ಭಾರತೀಯ ವಿಜ್ಞಾನಿಗಳಿಂದ ಇಂದು ಜಗತ್ತಿನ ರಾಷ್ಟ್ರಗಳು ಭಾರತವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿ ಎಂದರು.
ನಮ್ಮ ದೇಶದಲ್ಲಿ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಹಲವು ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಮತ್ತು ಸಮಯಪ್ರಜ್ಞೆ ಇರುತ್ತದೆ. ವಿದ್ಯಾರ್ಥಿಗಳಿಗೆ ದೊರೆಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪರಿಶ್ರಮ ಮತ್ತು ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಂದ್ರಯಾನ 3 ವಿಜ್ಞಾನಿಗಳ ತಂಡದ ಎನ್.ನರಸಿಂಹಮೂರ್ತಿ, ಚಂದ್ರಯಾನ 3ರ ಯಶಸ್ಸಿನಿಂದ ಇಸ್ರೋ ಹೊಗಳಿಕೆಗೆ ಪಾತ್ರವಾಗಿರುವುದು ಸಂತೋಷದ ಸಂಗತಿಯಾಗಿದೆ. ಚಂದ್ರಯಾನ ಯಶಸ್ಸಿನಿಂದ ಹಲವಾರು ಉಪಯೋಗ ಮತ್ತು ಅವಕಾಶಗಳು ನಮ್ಮ ದೇಶಕ್ಕೆ ದೊರೆಯುತ್ತದೆ. ಇಸ್ರೋ ಹಲವಾರು ಸಾಧನೆಗಳನ್ನು ಹಿಂದಿನಿಂದಲೂ ಮಾಡುತ್ತಾ ಮುನ್ನಡೆಯುತ್ತಿದೆ. ಇಸ್ರೋ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳಿಗೆ ಅವಕಾಶಗಳಿವೆ.
ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ನಾವು ಸೇರ ಬಯಸುವ ಹುದ್ದೆಗಳಿಗೆ ಸಾಕಷ್ಟು ಸಿದ್ದತೆ ಮಾಡಿಕೊಳ್ಳಬೇಕಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭೆ ಮನ್ನಣೆ ದೊರೆಯುತ್ತದೆ. ಬಡತನದಲ್ಲೆ ಸಾಧನೆ ಮಾಡುವವರು ಉತ್ತಮ ಸಾಧಕರಾಗಿ ಹೊರಹೊಮ್ಮುತ್ತಾರೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಜ್ಞಾನ ವಿಸ್ತರಣೆ ಬಳಸಬೇಕು ಎಂದರು.
ಶ್ರೀ ದೇವರಾಜು ಅರಸು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಚಂದ್ರಯಾನದ ಯಶಸ್ಸು ಜಗತ್ತು ಇಂದು ಭಾರತದ ಕಡೆಗೆ ನೋಡುವಂತೆ ಮಾಡಿದೆ. ನಮ್ಮ ದೇಶದ ಇಂತಹ ಸಾಧನೆಗಳು ಭಾರತೀಯರಲ್ಲಿ ವಿಶ್ವಾಸ ಮತ್ತು ಆತ್ಮಗೌರವವನ್ನು ಹೆಚ್ಚಿಸಿದೆ. ವಿಜ್ಞಾನ ಕ್ಷೇತ್ರದ ಸಂಶೋಧನೆಗಳು ನಿರಂತರವಾಗಿ ನಡೆಯಬೇಕಾಗಿದೆ. ದೆಹಲಿಯಲ್ಲಿ ನಡೆದ ಜಿ.20 ಸಭೆಯಲ್ಲಿ ಇಸ್ರೋ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವಾರು ಸಾಧಕರು ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕಲೆ, ಸಾಹಿತ್ಯ, ಸ್ವಾತಂತ್ರ್ಯ ಹೋರಾಟ, ಕನ್ನಡ ಚಳುವಳಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಚಂದ್ರಯಾನ 3 ಯಶಸ್ಸಿನ ವಿಜ್ಞಾನಿಗಳ ತಂಡದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಳೂರು ಗ್ರಾಮದ ಎನ್.ನರಸಿಂಹಮೂರ್ತಿ ಅವರು ಕಾರ್ಯ ನಿರ್ವಹಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಕೃಷ್ಣಪ್ಪ ಮಾತನಾಡಿ, ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೂ ಸಹ ಇಸ್ರೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ಇಂದು ಜನಸಾಮಾನ್ಯರ ಪರಿಷತ್ತಾಗಿ ಕೆಲಸ ಮಾಡುತ್ತಿದೆ. ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀದೇವರಾಜ ಅರಸು ವ್ಯವಹಾರ ನಿರ್ವಹಣೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್.ನಾಗರಾಜು, ಆಡಳಿತಾಧಿಕಾರಿ ರಮೇಶ್ ಕುಮಾರ್ , ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಟ್ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್, ಪದಾಧಿಕಾರಿಗಳಾದ ಎ.ಜಯರಾಮ, ಸಾ.ಲ.ಕಮಲನಾನಾಥ್, ಗಿರೀಶ್ ಎನ್.ಬರಗೂರು, ಉದಯರಾಧ್ಯ, ಷಫೀರ್, ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….