ಕಾವೇರಿ ಸಂಕಷ್ಟ: ಸೆ.26ರಂದು ಬೆಂಗಳೂರು ಬಂದ್‌ಗೆ ಕರೆ – ವಿವಿಧ ಸಂಘಟನೆಗಳ ಬೆಂಬಲ

ಬೆಂಗಳೂರು, (ಸೆ.23): ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಮಂಡ್ಯ ಬಂದ್ ಆಚರಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ಬಂದ್‌’ಗೆ ಕೂಡ ರೈತ ಪರ ಸಂಘಟನೆ ಕರೆ ನೀಡಿವೆ.

ಇದೇ ಮಂಗಳವಾರ ಅಂದರೆ ಸೆಪ್ಟೆಂಬರ್ 26 ರಂದು ಬೆಂಗಳೂರು ನಗರವನ್ನು ಬಂದ್‌ ಮಾಡಲು ರೈತಪರ ಸಂಘಟನೆಗಳು ತೀರ್ಮಾನಿಸಿವೆ.

ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರು ಬಂದ್‌ಗೆ ವಿವಿಧ ಸಂಘಟನೆಗಳಿಂದ ಸಹಕಾರ ಕೋರಿದ್ದಾರೆ. ಶಾಲಾ- ಕಾಲೇಜುಗಳಿಗೆ, ಫಿಲಂ ಚೇಂಬರ್ ಮತ್ತು ಐಟಿ ಕಂಪನಿಗಳಿಗೆ ರಜೆ ಘೋಷಿಸುವಂತೆ ಶಾಂತಕುಮಾರ್ ಮನವಿ ಮಾಡಿದ್ದಾರೆ. ಈ ಕುರಿತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆಮ್ ಆದ್ಮ ಪಾರ್ಟಿ, ಕನ್ನಡ ಪರ ಸಂಘಟನೆಗಳು ಸೇರಿದಂತೆ 15 ಕ್ಕೂ ಹೆಚ್ಚು ಸಂಘಟನೆಗಳು ಸಭೆಯಲ್ಲಿ ಭಾಗವಹಿಸಿದ್ದವು. ಇವುಗಳು ಬೆಂಗಳೂರು ಬಂದ್‌ಗೆ ಬೆಂಬಲ ಸೂಚಿಸಿವೆ. ಬೆಂಗಳೂರಿನಲ್ಲಿ ಶನಿವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಹಲವೆಡೆ ಸಂಚಾರ ಸ್ಥಗಿತಗೊಳಿಸಲು ಯತ್ನಿಸಿವೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ರೈತ ನಾಯಕ ಕುರುಬೂರು ಶಾಂತ ಕುಮಾರ್, ರಾಜ್ಯದ ಎಲ್ಲಾ ಸಂಘಟನೆಗಳು 26ರಂದು ನಡೆಯುವ ಬೆಂಗಳೂರು ಬಂದ್‌ಗೆ ಬೆಂಬಲ ನೀಡಬೇಕು ಎಂದು ತಿಳಿಸಿದ್ದಾರೆ.

ಕರ್ನಾಟಕ ಜಲ ಸಂರಕ್ಷಣಾ ಸಮಿತಿ (ಕೆಜೆಎಸ್ಎಸ್) ಸಹ ಸೆ 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಕಾವೇರಿ ನೀರು ಬಿಡುಗಡೆ ವಿರೋಧಿಸಿ ಹಲವು ಸಂಘಟನೆಗಳ ಬೆಂಬಲದೊಂದಿಗೆ ಬಂದ್‌ಗೆ ಕರೆ ನೀಡುತ್ತಿರುವುದಾಗಿ ತಿಳಿಸಿದೆ.

ಪ್ರತಿಭಟನೆಯ ಭಾಗವಾಗಿ ಬೆಂಗಳೂರಿನ ಟೌನ್ ಹಾಲ್‌ನಿಂದ ಮೈಸೂರು  ಬ್ಯಾಂಕ್ ಸರ್ಕಲ್ ವರೆಗೂ ರ್ಯಾಲಿಯನ್ನು ನಡೆಸಲಾಗುವುದು ಎಂದು ಮುಖಂಡರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಬಂದ್ ಗೆ ಬಿಜೆಪಿಯೂ ಬೆಂಬಲ ಸೂಚಿಸಿದೆ. ಈ ಬಂದ್‌’ಗೆ ಕನ್ನಡಿಗರು ಸಂಪೂರ್ಣ ಬೆಂಬಲ ನೀಡಬೇಕು ಕಾವೇರಿ ಜಲ ವಿವಾದವು ರಾಜಕೀಯವನ್ನು ಮೀರಿದೆ ಎಂದು ಬಿಜೆಪಿ ತಿಳಿಸಿದೆ. 

ಈ ಮಧ್ಯೆ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ (ಕೆಎಸಿಒಎ) ಅಧ್ಯಕ್ಷ ಕೆ ರಾಧಾ ಕೃಷ್ಣ ಬೆಂಗಳೂರು ಬಂದ್‌ಗೆ ಬೆಂಬಲ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಕಾವೇರಿ ನೀರಿನ ಸಮಸ್ಯೆ ಪ್ರಮುಖವಾಗಿ ಕಾಡುತ್ತಿರುವ ಕಾರಣ ಕೆಎಸ್‌ಆರ್‌ಟಿಸಿ ಬಂದ್‌ಗೆ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!