ಹ್ಯಾಂಗ್‌ಝೌ, (ಸೆ.23): ಚೀನಾದ ಹ್ಯಾಂಗ್ ಝೌನಲ್ಲಿ ಇಂದು ಏಷ್ಯನ್ ಗೇಮ್ಸ್ ಕ್ರೀಡಾಕೂಟ 2023ಕ್ಕೆ ಅದ್ದೂರಿ ಚಾಲನೆ ನೀಡಲಾಗಿದ್ದು, ಭಾರತೀಯ ಕ್ರೀಡಾಪಟುಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಏಷ್ಯನ್ ಗೇಮ್ಸ್ 19ನೇ ಆವೃತ್ತಿ ಉದ್ಘಾಟನಾ ಸಮಾರಂಭ ಇಂದು ಚೀನಾದ ಹ್ಯಾಂಗ್ ಝೌನಲ್ಲಿನ ಬಿಗ್ ಲೋಟಸ್ ಎಂದು ಕರೆಯಲ್ಪಡುವ, 80 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ, ಕ್ವಿಂಟಾಂಗ್ ನದಿ ತೀರದ “ಹ್ಯಾಂಗ್‌ಝೂ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ’ನಲ್ಲಿ ವರ್ಣ ರಂಜಿತ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಭಾರತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ಉದ್ಘಾಟನ ಸಮಾರಂಭದಲ್ಲಿ ಭಾರತದ ಜಂಟಿ ಧ್ವಜಧಾರಿಗಳಾಗಿ ಗಮನ ಸೆಳೆದರು.
ಭಾರತದ 655 ಕ್ರೀಡಾಪಟುಗಳು ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಇದು ಏಷ್ಯಾಡ್ ಇತಿಹಾಸದಲ್ಲೇ ಭಾರತದ ಗರಿಷ್ಠ ಸಂಖ್ಯೆಯ ಕ್ರೀಡಾಳುಗಳ ದಾಖಲೆಯಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಕ್ರೀಡಾಳುಗಳು ವನಿತೆಯರು ಖಾಕಿ ವಿನ್ಯಾಸದ ಆಕರ್ಷಕ ಸೀರೆ ಮತ್ತು ಪುರುಷರು ಅದೇ ಬಣ್ಣದ ಕುರ್ತಾ ಧರಿಸಿದ್ದರು. ಉದ್ಘಾಟನಾ ಸಮಾರಂಭ ಕಲಾತ್ಮಕ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.
ಇನ್ನು ಈ ಬಾರಿಯ ಕ್ರೀಡಾಕೂಟದಲ್ಲಿ ಒಟ್ಟು 45 ದೇಶಗಳ 12 ಸಾವಿರಕ್ಕೂ ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ. ಈ ಕ್ರೀಡಾಪಟುಗಳು 40 ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದು, ಈ ಮೂಲಕ ಚಿನ್ನದ ಪದಕಕ್ಕಾಗಿ ಸ್ಪರ್ಧೆ ನಡೆಸಲಿದ್ದಾರೆ.
ಅಂತೆಯೇ ಭಾರತದ 655 ಕ್ರೀಡಾಪಟುಗಳು ಈ ಬಾರಿ ಕಣದಲ್ಲಿದ್ದು, ಅತ್ಯುತ್ತಮದ ಪ್ರದರ್ಶನವನ್ನು ನಿರೀಕ್ಷಿಸಬಹುದು. ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಸೆಪ್ಟೆಂಬರ್ 19 ರಿಂದ ಶುರುವಾಗಿದೆ. ಅಂದರೆ ಆರಂಭದಲ್ಲಿ ಕೆಲ ಪಂದ್ಯಗಳ ಅರ್ಹತಾ ಸುತ್ತುಗಳು ನಡೆದಿದ್ದು, ಕೆಲ ಪಂದ್ಯಗಳನ್ನು ಆಯೋಜಿಸಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….