ಹಿಂದೆ ಮಹಾರಾಷ್ಟ್ರದ ಆಳಂದಿ ಎಂಬ ಊರಿನಲ್ಲಿ ಕುಲಕರ್ಣಿ ಎಂಬ ಸಭ್ಯ ಗೃಹಸ್ಥರೊಬ್ಬರು ವಾಸಿಸುತ್ತಿದ್ದರು. ಅವರು ಸನ್ಯಾಸ ಸ್ವೀಕರಿಸಿ ತಮ್ಮ ಪತ್ನಿಯನ್ನು ಬಿಟ್ಟು ಗುರುಗಳ ಹತ್ತಿರ ಹೋದರು. ಆದರೆ ಗುರುವಾಜ್ಞೆ ಇದ್ದ ಕಾರಾಣ ಅವರು ಮತ್ತೆ ಗೃಹಸ್ಥಾಶ್ರಮಕ್ಕೆ ಮರಳಿದರು.
ಅವರಿಗೆ ನಾಲ್ಕು ಮಕ್ಕಳು, ನಾಲ್ಕು ಮಕ್ಕಳೂ ಭಗವಂತನ ಪರಮಭಕ್ತರು. ಅವರ ಮಕ್ಕಳ ಹೆಸರು ನಿವೃತ್ತಿ, ಜ್ಞಾನೇಶ್ವರ, ಸೋಪಾನ ಮತ್ತು ಮುಕ್ತಾಬಾಯಿ. ಸನ್ಯಾಸದ ನಂತರ ಪುನಃ ಗೃಹಸ್ಥಾಶ್ರಮಕ್ಕೆ ಬಂದರೆಂದು ಊರಿನವರು ಅವರನ್ನು ಬಹಿಷ್ಕರಿಸಿದರು ಅಂದರೆ ಊರಿನವರು ಅವರ ಜೊತೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಅವರನ್ನು ಸನ್ಯಾಸಿ ಮಕ್ಕಳು ಎಂದು ಕರೆದು ಅವಮಾನಿಸುತ್ತಿದ್ದರು. ಊರಿನವರ ಅವಮಾನ ತಾಳದೆ ಕುಲಕರ್ಣಿ ತನ್ನ ಪತ್ನಿಯ ಜೊತೆ ಇಂದ್ರಾಯಣಿ ನದಿಯಲ್ಲಿ ತಮ್ಮ ಜೀವ ಅರ್ಪಿಸಿದರು.
ಕೋಣನಿಂದ ವೇದಗಳನ್ನು ಹೇಳಿಸಿದ ಜ್ಞಾನೇಶ್ವರರು: ಮಕ್ಕಳು ಊರಿನಲ್ಲಿ ಭಿಕ್ಷೆ ಬೇಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆಗ ಆಳಂದಿಯ ಪಂಡಿತರು ಪೈಠನದ ಪಂಡಿತರಿಂದ ಶುದ್ಧಿಪತ್ರವನ್ನು ತರಲು ಹೇಳಿದರು. ಆದಕಾರಣ ಎಲ್ಲರೂ ಪೈಠನಗೆ ಹೊರಟರು.
ಆ ಕಾಲದಲ್ಲಿ ಒಂದು ಊರಿಂದ ಇನ್ನೊಂದು ಊರಿಗೆ ಹೋಗಲು ಸಾರಿಗೆ ವ್ಯವಸ್ಥೆ ಇರಲಿಲ್ಲ. ಆ ಚಿಕ್ಕ ಮಕ್ಕಳು ಕಾಲ್ನಡಿಗೆಯಲ್ಲಿಯೇ ಪೈಠನಗೆ ತಲುಪಿದರು ಮತ್ತು ಅಲ್ಲಿಯ ಪಂಡಿತರ ಸಭೆಯಲ್ಲಿ ಶುದ್ಧೀಕರಣ ಪತ್ರವನ್ನು ಕೇಳಿದರು. ಪಂಡಿತರು ಅವರಿಗೆ ಶುದ್ಧೀಕರಣ ಪತ್ರವನ್ನು ಕೊಡಲು ನಿರಾಕರಿಸಿದರು. ಆಗ ಜ್ಞಾನೇಶ್ವರರು, ‘ಎಲ್ಲ ಪ್ರಾಣಿಗಳಲ್ಲಿ ಈಶ್ವರನ ಅಸ್ತಿತ್ವ ಇರುತ್ತದೆ’ ಎಂದು ಹೇಳಿದರು.
‘ಇಷ್ಟು ಚಿಕ್ಕ ಹುಡುಗ ನಮಗೆ ಜ್ಞಾನ ನೀಡಲು ಬರುತ್ತಾನೆ’ ಎಂದುಕೊಂಡ ಪಂಡಿತರಿಗೆಲ್ಲ ಇದು ಹಿಡಿಸಲಿಲ್ಲ. ಅವರಿಗೆ ಸಿಟ್ಟು ಬಂತು. ಆ ಸಮಯದಲ್ಲಿ ಒಬ್ಬ ದನಕಾಯುವ ಹುಡುಗನು ಅಲ್ಲಿಂದ ತನ್ನ ಎಮ್ಮೆಗಳನ್ನು ಕರೆದು ಕೊಂಡು ಹೋಗುತ್ತಾ ಇದ್ದನು.
ಪೈಠಣದ ವಿದ್ವಾಂಸರಲ್ಲಿ ಒಬ್ಬ, ‘ಅಲ್ಲಿ ಬರುತ್ತಿರುವ ಕೋಣದಲ್ಲಿ ನಿನಗೆ ಈಶ್ವರನು ಕಾಣಿಸುತ್ತಾನೆ ಎಂದಾದರೆ ಆ ಕೋಣದ ಬಾಯಿಂದ ವೇದಗಳನ್ನು ಹೇಳಿಸು’, ಎಂದು ಸವಾಲು ಹಾಕಿದನು.
ಜ್ಞಾನೇಶ್ವರರು ಮುಂದೆ ಬಂದು ಆ ಕೋಣದ ತಲೆಯ ಮೇಲೆ ಕೈಯನ್ನು ಇಟ್ಟರು. ತಕ್ಷಣ ಅದು ವೇದಗಳನ್ನು ಉಚ್ಚರಿಸತೊಡಗಿತು. ಈ ಪವಾಡವನ್ನು ನೋಡಿ ಎಲ್ಲ ವಿದ್ವಾಂಸರು ಆಶ್ಚರ್ಯಚಕಿತರಾದರು. ಅವರು ಜ್ಞಾನೇಶ್ವರರಿಗೆ ಶುದ್ಧೀಕರಣ ಪತ್ರವನ್ನು ಕೊಡಲು ಒಪ್ಪಿದರು.
ಕೃಪೆ: ಹಿಂದೂ ಜಾಗೃತಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….