ದೊಡ್ಡಬಳ್ಳಾಪುರ, (ಸೆ.29): ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸೆ.29ರಂದು ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ರಾಜ್ಯ ಬಂದ್ಗೆ ಬೆಂಬಲಿಸಿ, ಇಲ್ಲಿನ ಕನ್ನಡಪರ, ರೈತ, ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾವೇರಿ ನದಿ ನೀರು ಹೋರಾಟ ಸಮಿತಿ ನೇತೃತ್ವದಲ್ಲಿ ಸೆ.29ರಂದು ದೊಡ್ಡಬಳ್ಳಾಪುರ ಬಂದ್ ಆಚರಿಸಲು ತೀರ್ಮಾನಿಸಲಾಗಿದ್ದು, ಸಾರ್ವಜನಿಕರು, ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ಕ್ಷೇತ್ರದ ಜನರು ಬೆಂಬಲಿಸಬೇಕೆಂದು ಮುಖಂಡರು ಮನವಿ ಮಾಡಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ವಿವಿಧ ಸಂಘಟನೆಗಳ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಮುಖಂಡರು, ಬಂದ್ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುವುದು ಸಹಜ. ಆದರೆ ಇದು ರಾಜ್ಯ ಜ್ವಲಂತ ಸಮಸ್ಯೆಯಾಗಿದ್ದು, ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ರೈತರ ಹಿತರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಕಾವೇರಿ ನೀರು, ಮಂಡ್ಯ, ಮೈಸೂರು, ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಅಲ್ಲಿನ ರೈತರು ಸಮೃದ್ದವಾಗಿದ್ದರೆ ನಾವೂ ಸುಭಿಕ್ಷವಾಗಿರುತ್ತೇವೆ. ಈ ನಿಟ್ಟಿನಲ್ಲಿ ಜನಸಾಮಾನ್ಯರೂ ಸಹ ದನಿ ಎತ್ತಬೇಕಿದೆ. ಕಾವೇರಿ ನೀರನ್ನು ದೊಡ್ಡಬಳ್ಳಾಪುರಕ್ಕೆ ಹರಿಸುವ ಕುರಿತು ಸಹ ನಾವು ದನಿ ಎತ್ತಬೇಕಿದೆ. ಈ ದಿಸೆಯಲ್ಲಿ ಬಂದ್ ಅನಿವಾರ್ಯವಾಗಿದೆ ಎಂದರು.
ಸೆ.27 ರಂದು ತಿಂಗಳ ಕೊನೆಯ ಬುಧವಾರವಾಗಿದ್ದು, ಅಂದು ಮಾರುಕಟ್ಟೆ ಪ್ರದೇಶ, ದಿನಸಿ ವರ್ತಕರು ಸೇರಿದಂತೆ ವಿವಿಧ ವರ್ತಕರು ರಜಾ ಮಾಡುತ್ತಾರೆ. ಹೀಗಾಗಿ ಮತ್ತೆ ಶುಕ್ರವಾರ ಬಂದ್ ಆಚರಿಸಿದರೆ ಅವರಿಗೆ ತೊಂದರೆಯಾಗುತ್ತದೆ. ಬುಧವಾರದಂದು ರಜಾ ಮಾಡುವ ಬದಲು ಶುಕ್ರವಾರವೇ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬಂದ್ಗೆ ಬೆಂಬಲಿಸುವಂತೆ ವರ್ತಕರಲ್ಲಿ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸೆ.29ರಂದು ಬೆಳಿಗ್ಗೆ 7 ಗಂಟೆಗೆ ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಿ, ಕೈಗಾರಿಕಾ ಪ್ರದೇಶದಲ್ಲಿ ಬಂದ್ ಆಚರಿಸಲು ಮನವಿ ಮಾಡುವುದು.
ನಗರದ ಬೆಳಿಗ್ಗೆ 9 ಗಂಟೆಗೆ ತಾಲೂಕು ಕಚೇರಿ ವೃತ್ತದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಿದ್ದಲಿಂಗಯ್ಯ ವೃತ್ತ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಸಿ ಕಾವೇರಿ ವಿವಾದದ ಕುರಿತು ಜನರಿಗೆ ಮನದಟ್ಟು ಮಾಡುವಂತೆ ತೀರ್ಮಾನಿಸಲಾಗಿದ್ದು, ಎಲ್ಲಾ ವರ್ಗದ ಜನರ ಸಹಕಾರ ಕೋರಿದೆ ಎಂದು ಮುಖಂಡರು ತಿಳಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….