ಬೆಂಗಳೂರು, (ಸೆ.27): ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಬೆಂಗಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅವರನ್ನು ತಮಿಳುನಾಡು ಮತ್ತು ಡಿಎಂಕೆ ಏಜೆಂಟ್ ಎಂದು ಆರೋಪಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ ಇಂದು ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ತಮಿಳುನಾಡು ಏಜೆಂಟರಂತೆ ವರ್ತಿಸಬಾರದು ಎಂಬುದು ನಮ್ಮ ಸಿಎಂ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ತಿಳಿದಿರಬೇಕು. ವಾಸ್ತವ ಸಂಗತಿಗಳನ್ನು ಅರಿತುಕೊಳ್ಳಬೇಕು. ನಮ್ಮ ಬಹುತೇಕ ಎಲ್ಲಾ ಜಲಾಶಯಗಳಲ್ಲಿ ನೀರಿಲ್ಲ ಮತ್ತು ಕುಡಿಯುವ ಉದ್ದೇಶಕ್ಕೂ ಇರುವ ನೀರು ನಮಗೆ ಸಾಕಾಗುತ್ತಿಲ್ಲ. ಪ್ರಧಾನಿ ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಅವರು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಮತ್ತು ಜನಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಮಿಳುನಾಡಿನ ಏಜೆಂಟರಂತೆ ವರ್ತಿಸುತ್ತಿರುವುದರಿಂದ ಕರ್ನಾಟಕವು ಬಿಕ್ಕಟ್ಟು ಎದುರಿಸುತ್ತಿದೆ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಜನರು ನೀರಿಲ್ಲದೆ ಸಂಕಷ್ಟದಲ್ಲಿ ಇದ್ದರೆ ಜಲ ಸಂಪನ್ಮೂಲ ಸಚಿವರು ತಮಿಳುನಾಡಿಗೆ ಸಂತೋಷವಾಗಿ ನೀರು ಬಿಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇನ್ನು ಮಳೆ ಬರುವ ಸಾಧ್ಯತೆ ಬಹಳ ಕಡಿಮೆ. ಜಲಾಶಯಗಳು ಬರಿದಾಗಿವೆ. ಇದ್ದ ನೀರಿನಲ್ಲಿ ಬಹುಪಾಲನ್ನು ತಮಿಳುನಾಡಿಗೆ ಹರಿಸಲಾಗಿದೆ. ಈ ಬಗ್ಗೆ ಪ್ರಾಯಶ್ಚಿತ್ತವೇ ಇಲ್ಲದ ಜಲಸಂಪನ್ಮೂಲ ಸಚಿವರು ತಮಿಳುನಾಡಿಗೆ ನೀರು ಹೋಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಇವರಿಗೆ ರಾಜ್ಯದ ಜನ ಕಷ್ಟದಲ್ಲಿ ಇದ್ದರೆ ಸಂತೋಷ ಆಗುತ್ತದೆ ಎನ್ನುವ ವಿಷಯ ತಿಳಿದು ಅಚ್ಚರಿ ಆಯಿತು ಎಂದು ಮಾಜಿ ಮುಖ್ಯಮಂತ್ರಿಗಳು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಕಾವೇರಿ ಜಲ ನಿಯಂತ್ರಣ ಮಂಡಳಿಯ ಮುಂದೆ ತಮಿಳುನಾಡು 12,500 ಕ್ಯೂಸೆಕ್ ನೀರು ಬಿಡಿಸಿ ಎಂದು ಬೇಡಿಕೆ ಇಟ್ಟಿತ್ತು. ಸಮಿತಿ ದೊಡ್ಡ ಮನಸ್ಸು ಮಾಡಿ ಕೇವಲ ಮುಂದಿನ 18 ದಿನಗಳ ಕಾಲ 3,000 ಕ್ಯೂಸೆಕ್ ಮಾತ್ರ ಬಿಡುಗಡೆ ಮಾಡಿ ಎಂದು ಕರ್ನಾಟಕಕ್ಕೆ ಆದೇಶ ನೀಡಿದೆ. ಅದು ತಮಗೆ ಸಂತಸ ಉಂಟು ಮಾಡಿದೆ ಎಂದು ಸಚಿವರು ಹೇಳಿದ್ದಾರೆ. ಇವರು ಕರ್ನಾಟಕದ ಉಪ ಮುಖ್ಯಮಂತ್ರಿಯಾ? ಅಥವಾ ತಮಿಳುನಾಡಿನ ಏಜೆಂಟಾ? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಸಂಕಷ್ಟ ಹಂಚಿಕೆ ಸೂತ್ರ ರೂಪಿಸಿದ ಹೊರತು ತಮಿಳುನಾಡಿಗೆ ನೀರು ಹರಿಸಬೇಡಿ ಎಂದು ಜನರು ಮತ್ತು ವಿರೋಧ ಪಕ್ಷಗಳು ಒತ್ತಾಯ ಮಾಡುತ್ತಿದ್ದಾರೆ ಇವರು ಸಂತೋಷವಾಗಿ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜಲ ಸಂಪನ್ಮೂಲ ಸಚಿವರು ನೀಡುತ್ತಿರುವ ಹೇಳಿಕೆಗಳು ರಾಜ್ಯಕ್ಕೆ ಧಕ್ಕೆ ತರುತ್ತಿವೆ. ನಿನ್ನೆ ಹೇಳಿಕೆ ನೀಡಿದ್ದ ಅವರು ಕೆ ಆರ್ ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಅಧಿಕಾರಿಗಳು ನೀರೇ ಇಲ್ಲ ಎಂದು ನಿಯಂತ್ರಣ ಸಮಿತಿ ಸಭೆಯಲ್ಲಿ ಹೇಳುತ್ತಾರೆ. ಜನರು ಯಾರ ಮಾತು ನಂಬುವುದು? ಮಂಗಳವಾರ ಸಚಿವರು ನೀಡಿರುವ ಹೇಳಿಕೆಯಂತೂ ಬೇಜವಾಬ್ದಾರಿಯ ಪರಮಾವಧಿ ಎಂದು ಅವರು ಟೀಕಾಪ್ರಹಾರ ನಡೆಸಿದರು.
ನಾನಿಂದು ಮೆಟ್ಟೂರು ಜಲಾಶಯದ ನೀರಿನ ಮಟ್ಟದ ವಿವರಗಳನ್ನು ತರಿಸಿದ್ದೇನೆ. 124.80 ಅಡಿ ಗರಿಷ್ಠ ಮಟ್ಟದ ಆ ಜಲಾಶಯದಲ್ಲಿ ಬುಧವಾರ 38.02 ಅಡಿ ನೀರಿತ್ತು. 11.09 ಟಿಎಂಸಿ ನೀರು ಸಂಗ್ರಹ ಇದೆ. 7231 ಕ್ಯೂಸೆಕ್ ಒಳಹರಿವು ಇದ್ದರೆ, 6500 ಕ್ಯೂಸೆಕ್ ಹೊರ ಹರಿವು ಇದೆ. ಈ ವಿವರ ಸಚಿವರ ಬಳಿ ಇದೆಯಾ? ಅವರು ಕೊಡುತ್ತಿರುವ ಹೇಳಿಕೆಗಳಿಗೆ ತಾಳಮೇಳ ಇದೆಯಾ? ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂತಾದವರು ಮಾತನಾಡಿದರು. ಎರಡೂ ಪಕ್ಷಗಳ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….