ಚಿಕ್ಕಬಳ್ಳಾಪುರ, (ಸೆ.27): ಕಾವೇರಿ ಹಿನ್ನಲೆ ಬೆಂಗಳೂರು ಬಂದ್ ಪರಿಣಾಮ ಹೂ ಬೆಲೆ ಕುಸಿತ ಕಂಡಿದ್ದರಿಂದ ಹೂಗಳನ್ನು ರೈತರು ಮಾರುಕಟ್ಟೆಯಲ್ಲಿಯೇ ಸುರಿದ ಘಟನೆ ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಯಲ್ಲಿ ನಡೆದಿದೆ.
ಜಿಲ್ಲೆಯ ರೈತರು ಪಷ್ಪೋದ್ಯಮವನ್ನೇ ನಂಬಿಕೊಂಡು ಬದುಕು ಕಂಡವರು. ಪಷ್ಪೋದ್ಯಮದಲ್ಲಿ ಏನೇ ಹೆಚ್ಚು ಕಮ್ಮಿಯಾದರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಷ್ಟು ದಿನ ಹೊಗಳ ಅತಿವೃಷ್ಟಿಯಿಂದ ಕಂಗಾಲಾಗಿದ್ದ ಹೂ ಬೆಳೆಗಾರರು, ಮಂಗಳವಾರ ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನಲೆ ಬೆಂಗಳೂರು ಬಂದ್ ಆದ ಕಾರಣ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೂಗಳನ್ನುರೈತರು ಮಾರುಕಟ್ಟೆಯಲ್ಲಿಯೇ ಸುರಿದರೆ ಇನ್ನೂ ಕೆಲವರು ಟ್ರ್ಯಾರ್ಕ್ಟಗೆ ತುಂಬಿ ತಿಪ್ಪೆ ಗುಂಡಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೂ ಖರೀದಿಸುವವರೇ ಇಲ್ಲ: ಹೂವು ಮಾರುಕಟ್ಟೆಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದಲ್ಲಿ, ಹೂವು ಬೆಳೆಗಾರರೇ ಹೆಚ್ಚಾಗಿದ್ದಾರೆ. ಪ್ರಸ್ತುತ ಸುಮಾರು 13 ಸಾವಿರ ಎಕರೆಗಳಲ್ಲಿ ಹೂವು ಬೆಳೆಯಲಾಗುತ್ತಿದೆ. ಹೀಗೆ ಬೆಳೆದ ಹೂವನ್ನು ಮಾರಾಟ ಮಾಡಲು ರೈತರು, ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಗೆ ಬಂದಿದ್ದರು. ಆದರೆ ಹೂ ಕೊಂಡುಕೊಳ್ಳುವ ದೊಡ್ಡ ದೊಡ್ಡ ವರ್ತಕರು ಬಂದಿರಲಿಲ್ಲ.
ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನಲೆ ಇಂದು ಬೆಂಗಳೂರು ಬಂದ್ ಮಾಡಿದ ಕಾರಣ ಬೆಂಗಳೂರಿನ ವರ್ತಕರು ಮಾರುಟ್ಟೆಗೆ ಬಂದಿರಲಿಲ್ಲ. ಇದರಿಂದ ಹೂಗಳನು ಕೊಂಡುಕೊಳ್ಳುವವರು ಯಾರು ಇಲ್ಲದೆ ಹೂಗಳು ತಿಪ್ಪೆ ಪಾಲಾದವು.
ರಾಶಿ ರಾಶಿ ಸೇವಂತಿ, ಚೆಂಡೂ ಹೂ, ರೋಡ್ ಸೇರಿದಂತೆ ವಿವಿಧ ಹೂಗಳನ್ನು ಯಾರು ಕೊಂಡುಕೊಳ್ಳದ ಕಾರಣ. ಹೂಗಳನ್ನು ರೈತರು ಮಾರುಕಟ್ಟೆಯಲ್ಲಿಯೇ ಸುರಿಯುತ್ತಿದ್ದ ದೃಶ್ಯ ಕಂಡುಬಂತು.
ಚಿಕ್ಕಬಳ್ಳಾಪುರದಿಂದ ರಾಜಧಾನಿ ಬೆಂಗಳೂರಿಗೆ ಪ್ರತಿದಿನ 10 ಟನ್ ಗಿಂತಲೂ ಹೆಚ್ಚು ಹೂ ಮಾರಾಟವಾಗುತ್ತದೆ. ಆದರೆ ಇಂದು ಬೆಂಗಳೂರು ಬಂದ್ ಆದ ಕಾರಣ ವ್ಯಾಪಾರಿಗಳು ಚಿಕ್ಕಬಳ್ಳಾಪುರದತ್ತ ಮುಖ ಮಾಡಿರಲಿಲ್ಲ. ಇದರಿಂದ ಹೂವು ಬೆಳೆಗಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ.
20 ಕೆಜಿ ಹೂ ಕೀಳುವ ಒಬ್ಬ ಕೂಲಿ ಆಳಿಗೆ ಕನಿಷ್ಟ 150 ರುಪಾಯಿಗಳ ಕೂಲಿ ಮತ್ತು ಕಾಫೀ, ಟೀ, ತಿಂಡಿ ಎಂದು ಸುಮಾರು 400ರಿಂದ 450 ರುಪಾಯಿ ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ 25 ಕೆಜಿ ಹೂವಿನ ಚೀಲ 80 ರಿಂದ 100 ರುಪಾಯಿಗೆ ಮಾರಾಟವಾದರೆ ಎನು ಮಾಡುವುದು ಎಂದು ಮುತ್ತೂರು ಗ್ರಾಮದ ಹೂ ಬೆಳೆಗಾರ ದೇವರಾಜು ತಮ್ಮ ಅಸಹಾಯಕತೆಯನ್ನು ವ್ಯಕ್ತ ಪಡಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….