ನ್ಯೂಜೆರ್ಸಿ, (ಅ.12): ಆಧುನಿಕ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು ಎಂದೇ ಪ್ರಖ್ಯಾತಿ ಹೊಂದಿರುವ, ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣಗೊಂಡಿರುವ ಅಕ್ಷರಧಾಮ ದೇಗುಲವನ್ನು ಕಳೆದ ಭಾನುವಾರ ಲೋಕಾರ್ಪಣೆ ಮಾಡಲಾಗಿದ್ದು, ಸೋಮವಾರದಿಂದ ಭಕ್ತರಿಗಾಗಿ ಅವಕಾಶ ಕಲ್ಪಿಸಲಾಗಿದೆ.
ಭಾರತದಿಂದ ಹೊರಗೆ ನಿರ್ಮಿಸಲಾಗಿರುವ ಅತ್ಯಂತ ದೊಡ್ಡ ದೇಗುಲ ಎಂಬ ವಿಶೇಷ ಈ ದೇವಾಲಯದ ಹಿರಿಮೆಯಾಗಿದೆ.
ಒಟ್ಟು 4.7 ದಶಲಕ್ಷ ಗಂಟೆ ಸಮಯವನ್ನು ಈ ದೇಗುಲದ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗಿದೆ. 12 ಸಾವಿರ ಸ್ವಯಂ ಸೇವಕರೇ ನಿರ್ಮಾಣ ಮಾಡಿದ್ದಾರೆ ಎಂಬುದು ವಿಶೇಷ. 183 ಎಕ್ರೆ ವಿಸ್ತೀರ್ಣದಲ್ಲಿ ಈ ಬಿಎಪಿಎಸ್ ಸ್ವಾಮಿನಾರಾಯಣ್ ಅಕ್ಷರಧಾಮ ದೇಗುಲವನ್ನು ನಿರ್ಮಿಸಲಾಗಿದೆ.
ಇಟಲಿ ಮತ್ತು ಬಲ್ಗೇರಿಯಾದಿಂದ ಮಾರ್ಬಲ್ ಅನ್ನು ಭಾರತಕ್ಕೆ ತೆಗೆದುಕೊಂಡು ಬಂದು, ಇಲ್ಲಿಂದ ಅಮೆರಿಕಕ್ಕೆ ತರಲಾಗಿದೆ. 2011ರಲ್ಲಿ ಈ ದೇಗುಲದ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಈಗ ಉದ್ಘಾಟನೆ ಕಂಡಿದೆ.
ಸದ್ಯ ಜಗತ್ತಿನಲ್ಲೇ ಅತ್ಯಂತ ದೊಡ್ಡ ಹಿಂದೂ ದೇಗುಲ ಸಂಕೀರ್ಣ ಎಂದು ಕಾಂಬೋಡಿಯಾದಲ್ಲಿರುವ ಆಂಗ್‌ಕರ್ ವಾಟ್ ಅನ್ನು ಗುರುತಿಸಲಾಗುತ್ತದೆ. ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಯುನೆಸ್ಕೋದ 1,119 ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ.
ಈಗ ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿ ಬೋಚಾಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ ಅಥವಾ ಬಿಎಪಿಎಸ್‌ನವರು ಈ ದೇಗುಲವನ್ನು ನಿರ್ಮಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….