ಲಕ್ಷ್ಮೇಶ್ವರ, (ಜ.08): ನಟ ಯಶ್ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಬೃಹತ್ ಗಾತ್ರದ ಪ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಸೂರಣಗಿ ಗ್ರಾಮದ ಅಂಬೇಡ್ಕ ನಗರದ ಯಶ್ ಅಭಿಮಾನಿಗಳು ಭಾನುವಾರ ರಾತ್ರಿ ಬೃಹತ್ ಗಾತ್ರದ ಪ್ಲೆಕ್ಸ್ ಅಳವಡಿಸುವುದಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಕಟೌಟ್ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಲಕ್ಷೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಂತ್ಯಸಂಸ್ಕಾರ: ಯುವಕರ ಅಂತಿಮ ಸಂಸ್ಕಾರದಲ್ಲಿ ಇಡೀ ಸೂರಣಗಿ ಗ್ರಾಮವಲ್ಲದೆ ಸುತ್ತಮುತ್ತಲಿನ ಊರುಗಳ ಜನ ಸಹ ಭಾಗಿಯಾಗಿದ್ದರು. ವಿದ್ಯುತ್ ಪ್ರವಹಿಸಿ ಸಾವಿಗೀಡಾದ ಹಣಮಂತ ಹರಿಜನ, ಮುರಳಿ ನಡುವಿನಮನಿ ಮತ್ತು ನವೀನ್ ಅವರ ಅಂತ್ಯಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.
ಮೃತ ಯುವಕರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಇಂದು ಸಂಜೆ ನಟ ಯಶ್ ಭೇಟಿ: ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳು ದಾರುಣವಾಗಿ ಮೃತಪಟ್ಟ ಘಟನೆ ಬಗ್ಗೆ ನಟ ಯಶ್ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಸಿನಿಮಾ ಕೆಲಸದ ಮೇಲೆ ವಿದೇಶಕ್ಕೆ ತೆರಳುವುದಾಗಿ ಈ ಹಿಂದೆಯೇ ಹೇಳಿದ್ದ ಯಶ್ ಈ ಘಟನೆ ನಡೆದ ಹಿನ್ನೆಲೆಯಲ್ಲಿ ವಿಶೇಷ ವಿಮಾನ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ಗದಗಕ್ಕೆ ಬಂದು ಅಲ್ಲಿಂದ ರಸ್ತೆ ಮಾರ್ಗ ಮೂಲಕ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….